ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ. 25 ರಿಂದ ಆರಂಭವಾಗುವ ಮಹಾಶಿವರಾತ್ರಿ ಜಾತ್ರೆಗಾಗಿ 5 ಲಕ್ಷ ಲಾಡುಗಳನ್ನು ತಯಾರಿಸಿ ದಾಸ್ತಾನಿಡಲಾಗಿದ್ದು ನಿತ್ಯ 70 ಸಾವಿರ ಲಾಡುಗಳನ್ನು ತಯಾರು ಮಾಡಲಾಗುತ್ತಿದೆ.
ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಈ ಕಾರಣಕ್ಕೆ ಲಾಡುಗಳನ್ನು ದಾಸ್ತಾನು ಮಾಡಿಡಲಾಗಿದೆ. ಅಲ್ಲದೇ ನಿರಂತರ ದಾಸೋಹ ಕೂಡ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಇಂದು(ಫೆಬ್ರವರಿ.23) ಮಧ್ಯಾಹ್ನ ಲಾಡು ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಲಾಡು ತಯಾರಿಯನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಜಾತ್ರೆಗೆ ಬರುವ ಭಕ್ತರಿಗೆ ಲಾಡು ಪ್ರಸಾದ ವಿತರಣೆಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಗಮನ ಹರಿಸಬೇಕು ಎಂದು ಆಡಳಿತ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.





