ಕೊಳ್ಳೇಗಾಲ: ಜೋತುಬಿದ್ದ ವಿದ್ಯುತ್ ತಂತಿ ತಗುಲಿ ನಾಲ್ಕು ಹೆಕ್ಟೇರ್ ಕಬ್ಬು ಭಸ್ಮವಾದ ಘಟನೆ ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಪ್ರಭು ಎಂಬುವವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ರೈತ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕಳೆದ ವರ್ಷವೂ ಒಂದೂವರೆ ಹೆಕ್ಟೇರ್ ಕಬ್ಬು ಕಳೆದುಕೊಂಡಿದ್ದ ಈ ಕುಟುಂಬಕ್ಕೆ ಈಗ ಮತ್ತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ನಾಲ್ಕು ಹೆಕ್ಟೇರ್ ಹಾಗೂ ಪೈಪ್‌ಲೈನ್ ಸೇರಿದಂತೆ ಅಪಾರ ಪ್ರಮಾಣದ ನಷ್ಟವಾಗಿದೆ. ಘಟನೆಯಿಂದ ರೈತರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಹೆಚ್ಚಿನ ಅನಾಹುತ ಆಗದಂತೆ ತಡೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ. ಇನ್ನು ಪದೇ ಪದೇ ಆಗುತ್ತಿರುವ ದುರ್ಘಟನೆಯಿಂದ ಜಮೀನನ್ನೇ ಮಾರಾಟ ಮಾಡಲು ರೈತ ಕುಟುಂಬಗಳು ನಿರ್ಧಾರ ಮಾಡಿವೆ ಎಂದು ತಿಳಿದುಬಂದಿದೆ. ಇನ್ನು ಚೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಕುಟುಂಬಗಳು ಆರೋಪಿಸಿವೆ.