ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಆಡಳಿತ ಸೋಮವಾರದಿಂದ ಹೊರರೋಗಿ ವಿಭಾಗಗಳನ್ನು ಪುನಾರಂಭಿಸಲಿದೆ.
ಕಳೆದ ಅಕ್ಟೋಬರ್‌ನಲ್ಲಿ ನಗರದ ಹೊರವಲಯದ ಯಡಬೆಟ್ಟದಲ್ಲಿ ಸಿಮ್ಸ್ ಬೋಧನಾ ಆಸ್ಪತ್ರೆ ಉದ್ಘಾಟನೆ ಆದ ಬಳಿಕ ಹಳೆ ಜಿಲ್ಲಾಸ್ಪತ್ರೆಯಲ್ಲಿದ್ದ ಹೆರಿಗೆ ಮತ್ತು ಮಕ್ಕಳ ವಿಭಾಗಗಳು, ಸ್ಕ್ಯಾನಿಂಗ್ ಕೇಂದ್ರವನ್ನು ಬಿಟ್ಟು ಉಳಿದೆಲ್ಲಾ ವಿಭಾಗಗಳನ್ನು ಯಡಬೆಟ್ಟದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ನಂತರ ಹಳೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿಲಾಗಿತ್ತು. ಕೊರೊನಾ ಕಡಿಮೆಯಾದ ನಂತರ ಕಟ್ಟಡ ಖಾಲಿ ಬಿದ್ದಿತ್ತು. ಆಸ್ಪತ್ರೆ ಸ್ಥಳಾಂತರ ಆದ ಬಳಿಕ ಹಳೆ ಜಿಲ್ಲಾಸ್ಪತ್ರೆಯಲ್ಲಿ ಮೊದಲಿನಂತೆ ವೈದ್ಯಕೀಯ ಸೇವೆ ಲಭ್ಯವಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಹಲವು ಸಂಘಟನೆಗಳು ಪ್ರತಿಭಟನೆಯನ್ನೂ ಮಾಡಿದ್ದವು.
ನಗರದಿಂದ ೭ ಕಿ.ಮೀ ದೂರದಲ್ಲಿರುವ ಯಡಬೆಟ್ಟಕ್ಕೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವ ಅನಿವಾರ್ಯತೆ ಬಗ್ಗೆ ರೋಗಿಗಳು ಅಳಲು ತೋಡಿಕೊಂಡಿದ್ದರು. ಆಗಾಗ ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಳೆ, ಪ್ರವಾಹ ಹಾನಿ ಸಂಬಂಧ ನಡೆಸಿದ್ದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಚಿಕಿತ್ಸೆ ಆರಂಭಿಸಲು ಸಿಮ್ಸ್ ಡೀನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಸಚಿವರ ಸೂಚನೆಯಂತೆ ಹೊರ ರೋಗಿಗಳ ವಿಭಾಗ ಆರಂಭವಾಗಲಿದೆೆ. ಕೆಲವು ದಿನಗಳ ನಂತರ ತುರ್ತು ಚಿಕಿತ್ಸಾ ವಿಭಾಗವನ್ನೂ ತೆರೆಯಲಾಗುವುದು ಎಂದು ಜಿಲ್ಲಾ ಸರ್ಜನ್ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.





