ಸುದ್ದಿಗೋಷ್ಠಿಯಲ್ಲಿ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಮಾಹಿತಿ
ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಜಿಲ್ಲಾದ್ಯಂತ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ೧೦೯೨೦ ವಿವಿಧ ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು ಎಂದು ಪ್ರಾಧಿಕಾರದ ಜಿಲ್ಲಾಧ್ಯಕ್ಷರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ತಿಳಿಸಿದರು.
ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ನ್ಯಾಯಾಲಯಗಳಲ್ಲಿ ಭಾನುವಾರ ಅದಾಲತ್ ನಡೆಯಿತು. ಸಾಕಷ್ಟು ಮೊಕದ್ದಮೆಗಳು ಇತ್ಯರ್ಥವಾದವು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನ್ಯಾಯಾಲಯದಲ್ಲಿ ಬಾಕಿಯಿದ್ದ ೧೮೯೦ ಮತ್ತು ವ್ಯಾಜ್ಯ ಪೂರ್ವ ೯೦೩೦ ಪ್ರಕರಣಗಳು ಸೇರಿದಂತೆ ಒಟ್ಟು ೧೦೯೨೦ ಅನ್ನು ದೂರುದಾರರ ಒಪ್ಪಿಗೆಯಂತೆ ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು. ೧೮೯೦ ಪ್ರಕರಣಗಳಲ್ಲಿ ೩,೯೯,೪೬,೮೬೧ ರೂ. ಮತ್ತು ೯೦೩೦ ಕೇಸ್‌ಗಳಲ್ಲಿ ೧,೮೦,೬೯,೮೦೦ ರೂ. ಬಂದಿದೆ ಎಂದು ವಿವರಣೆ ನೀಡಿದರು.
ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳು ವಿಲೇವಾರಿ ಆಗಿದ್ದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಅಲ್ಲದೆ ನ್ಯಾಯಾಲಯಗಳ ಮೇಲಿನ ಕೇಸುಗಳ ಹೊರೆ ತಗ್ಗಿದೆ. ಇದು ಯಶಸ್ವಿಯಾಗಲು ನ್ಯಾಯಾಧೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಮಾಧ್ಯಮದವರ ಸಹಕಾರ ನೀಡಿದ್ದಾರೆ ಎಂದು ಧನ್ಯವಾದ ತಿಳಿಸಿದರು.
ಗೋಷ್ಠಿಯಲ್ಲಿ ಸಿವಿಲ್ ನ್ಯಾಯಾಧೀಶರಾದ ಶ್ರೀಧರ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ವಿರೂಪಾಕ್ಷ ಹಾಜರಿದ್ದರು.
* ವಿಚ್ಛೇದನ ಬಯಸಿದ್ದರೂ ಒಂದಾದ ದಂಪತಿ
ಕಳೆದ ಒಂದು ವರ್ಷದ ಹಿಂದೆ ದಂಪತಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಒಬ್ಬರಿಗೊಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಒಂದಾಗಿ ಬಾಳುವುದು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅದಾಲತ್‌ನಲ್ಲಿ ಆಪ್ತ ಸಮಾಲೋಚನೆ ನಡೆಸಿ ಇಬ್ಬರ ನಡುವೆ ರಾಜೀ ಸಂಧಾನ ಮಾಡಿಸಲಾಯಿತು. ದಂಪತಿ ಒಟ್ಟಾಗಿ ಬಾಳುವುದಾಗಿ ಒಪ್ಪಿಕೊಂಡು ಕೇಸ್ ಇತ್ಯರ್ಥ ಮಾಡಿಕೊಂಡರು.
೮ ವರ್ಷಗಳಷ್ಟು ಹಳೆಯದಾದ ಆಸ್ತಿಯಲ್ಲಿ ಪಾಲು ಹಂಚಿಕೆ ಮೊಕದ್ದಮೆಯು ೨೦೧೫ ರಲ್ಲಿ ನ್ಯಾಯಾಲಯಕ್ಕೆ ಬಂದಿತ್ತು. ತಂದೆಯ ಆಸ್ತಿಯಲ್ಲಿ ಅಣ್ಣ ತಮ್ಮಂದಿರAತೆ ನನಗೂ ಪಾಲು ಬೇಕೆಂದು ಕೋರಿ ತಂಗಿಯೊಬ್ಬಳು ಕೇಸ್ ದಾಖಲಿಸಿದ್ದರು. ಸಹೋದರರು, ಸಹೋದರಿಯರ ಮನವೊಲಿಸಿ ಸಂಧಾನ ಮೂಲಕ ಮುಗಿಸಲಾಯಿತು.
ಆಸ್ತಿಯನ್ನು ಕ್ರಯ ಮಾಡಲು ಒಪ್ಪಂದವಾಗಿ ೨೫ ಲಕ್ಷ ರೂ. ನೀಡಲಾಗಿತ್ತು. ಆದರೆ, ಆಸ್ತಿಯನ್ನು ಮಾರಾಟ ಮಾಡಲು ಮನಸ್ಸು ಮಾಡದ ಮಾಲೀಕರು ೨೫ ಲಕ್ಷ ರೂ.ವಾಪಸ್ ನೀಡಿ ಆಸ್ತಿಯನ್ನು ಮರಳಿ ಪಡೆದ ಪ್ರಕರಣವನ್ನು ಮುಕ್ತಾಯ ಮಾಡಲಾಯಿತು ಎಂದು ನ್ಯಾಯಾಧೀಶರು ತಿಳಿಸಿದರು.





