ಹನೂರು : ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಿಂದ ಹನೂರು ಪಟ್ಟಣದ ವರೆಗೆ ಮಂದಗತಿಯಲ್ಲಿ ನಡೆಯುತ್ತಿದ್ದ ಕೆಶಿಪ್ ರಸ್ತೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ.

24 ಕಿಲೋ ಮೀಟರ್ ರಸ್ತೆಯನ್ನು 108 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 2018 ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ರವರು ಕೆಶಿಪ್ ರಸ್ತೆ ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕೆಶಿಪ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ 4 ವರ್ಷಗಳೇ ಕಳೆದಿದ್ದರೂ ಸಹ ಕಾಮಗಾರಿ ಮಂದಗತಿಯಲ್ಲಿ ನಡೆಯತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ಬಾರಿ ಸುದ್ದಿ ಪ್ರಕಟವಾಗಿತ್ತು.ಆದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರುಗಳು ತಲೆಕೆಡಿಸಿಕೊಂಡಿರಲಿಲ್ಲ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ವಿ ಸೋಮಣ್ಣ ರವರನ್ನು 6ತಿಂಗಳ ಹಿಂದೆ ನೇಮಕ ಮಾಡಿದ ನಂತರ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಆದರೂ ಸಹ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ, ಇದೇ ತಿಂಗಳ ಹತ್ತು ಮತ್ತು ಹನ್ನೊಂದು ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿಕೊಟ್ಟು ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳಿಗೆ ಕಾನೂನು ಪ್ರಕಾರದಂತೆ ರಸ್ತೆ ಕಾಮಗಾರಿಗೆ ಅವಶ್ಯವಿರುವ ನಿವೇಶನವನ್ನು ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆ ಎಚ್ಚೆತ್ತ ಉಪವಿಭಾಧಿಕಾರಿಗಳು ಹನೂರು ಪಟ್ಟಣದ 39 ಕಟ್ಟಡ ಮಾಲೀಕರಿಗೆ ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ. ಅಂತಿಮ ನೋಟಿಸ್ ಜಾರಿಯಾದ ಹದಿನೈದು ದಿನಗಳ ಒಳಗಾಗಿ ನೋಟಿಸ್ ನಲ್ಲಿ ನಮೂದಿಸಿರುವ ಕಟ್ಟಡ ಹಾಗೂ ನಿವೇಶನಕ್ಕೆ ಸಂಬಂಧಪಟ್ಟಂತೆ ನಿಮ್ಮ ಹಕ್ಕು ಸಾಬೀತುಪಡಿಸಲು ದೃಢೀಕೃತ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ದಾಖಲಾತಿಗಳನ್ನು ಪಡೆದು ನಂತರ ಪರಿಶೀಲಿಸಿ ಸರಿಯಾಗಿದ್ದಲ್ಲಿ ಆ ವಾರ್ಡ್ ನಂತೆ ಮೊಬಲಗು ನೀಡಲಾಗುತ್ತದೆ. ಸರಿಯಾಗಿದ್ದಲ್ಲಿ ಆ ವಾರ್ಡ್ ನಂತೆ ಮೊಬಲಗು ನೀಡಲಾಗುತ್ತದೆ. ದಾಖಲಾತಿಗಳನ್ನು ಸಲ್ಲಿಸಲು ವಿಳಂಬ ಮಾಡಿದ್ದಲ್ಲಿ ನಿಮ್ಮ ಕಟ್ಟಡ ಹಾಗೂ ನಿವೇಶನಕ್ಕೆ ನಿಗದಿಪಡಿಸಿರುವ ಅವಾರ್ಡ್ ಮೊಬಲಗಳನ್ನು ಜಿಲ್ಲಾ ನ್ಯಾಯಾಲಯದಲ್ಲಿ ಠೇವಣಿ ಇಡಲಾಗುವುದು. ನಂತರದ ಅವಧಿಗೆ ಬಡ್ಡಿ ದೊರೆಯುವುದಿಲ್ಲ ಎಂದು ನೋಟಿಸ್ ನಲ್ಲಿ ಮಾಹಿತಿ ನೀಡಿದ್ದಾರೆ. ಈ ನೋಟಿಸ್ ಪ್ರತಿಗಳನ್ನು ಪಟ್ಟಣ ಪಂಚಾಯಿತಿಯ ಪ್ರಭಾರ ಕಂದಾಯ ನಿರೀಕ್ಷಕ ಮಂಜುನಾಥ್ ಸಂಬಂಧಪಟ್ಟ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.





