Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಗ್ರಾಮಕ್ಕೆ ಲಗ್ಗೆ ಇಟ್ಟ ಆನೆ ಹಿಂಡು: ರೈತರು ಕಂಗಾಲು

ಚಾ. ನಗರದ ಅರಕಲವಾಡಿ ,ಲಿಂಗನಪುರದಲ್ಲಿ ಆನೆ ದಾಳಿಗೆ ಬೆಳೆ, ಫಸಲು ನಾಶ
ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ, ಲಿಂಗನಪುರದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಹಿಂಡು ಹಿಂಡಾಗಿ ರೈತರ ಜಮೀನುಗಳಿಗೆ ನುಗ್ಗಿ ಬಾಳೆ, ಮುಸುಕಿನ ಜೋಳ ಹಾಗೂ ತೆಂಗಿನ ಸಸಿಗಳನ್ನು ತಿಂದು ತುಳಿದು ಹಾಳು ಮಾಡಿವೆ.


ಅರಕಲವಾಡಿ ಹನುಮಯ್ಯ ಅವರಿಗೆ ಸೇರಿದ 800 ಬಾಳೆಗಿಡಗಳು ಆನೆ ದಾಳಿಗೆ ಸಿಲುಕಿ ನೆಲಕಚ್ಚಿದೆ. 1ಎಕರೆಯಲ್ಲಿ ಹಾಕಿದ್ದ ಮೂರ್ನಾಲ್ಕು ತಿಂಗಳ ಅವಧಿಯ ಬಾಳೆಯನ್ನು ಸಂಪೂರ್ಣ ಮೇಯ್ದು ಲದ್ದಿ ಹಾಕಿ ಅಡ್ಡಾಡಿವೆ. ಇದೇ ರೀತಿ ತೆಂಗಿನ ಸಸಿಗಳನ್ನು ಕಿತ್ತುಹಾಕಿವೆ. ಕೊಯ್ಲಿಗೆ ಬಂದ ಮುಸುಕಿನ ಜೋಳವನ್ನೂ ನಾಮಾವಶೇಷ ಮಾಡಿವೆ ಎಂದು ರೈತ ಹನುಮಯ್ಯ ಆಂದೋಲನದ ಜತೆ ದು:ಖ ತೋಡಿಕೊಂಡರು.
ಅರಕಲವಾಡಿ ಪಕ್ಕದ ಲಿಂಗನಪುರದಲ್ಲಿ ರಾಮಣ್ಣ ಎಂಬುವರಿಗೆ ಸೇರಿದ 2 ಎಕರೆ ಮುಸುಕಿನ ಜೋಳವನ್ನು ಆನೆಗಳು ಮೇಯ್ದು ಇನ್ನಿಲ್ಲದಂತೆ ಮಾಡಿವೆ.ಇದೇ ರೀತಿ ಸುತ್ತ ಮುತ್ತಲ ರೈತರ ಬೆಳೆಗಳ ಮೇಲೆ ಅಡ್ಡಾಡಿ ಹೋಗಿವೆ.
ತಮಿಳುನಾಡಿನ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಅರಕಲವಾಡಿ ಗ್ರಾಮವಿದ್ಧುಈ ಗ್ರಾಮ ಕೊಂಗಳ್ಳಿಬೆಟ್ಟಕ್ಕೆ
ಸನಿಹದಲ್ಲಿದೆ. ತಮಿಳುನಾಡು ಕಡೆಯಿಂದ ಸುಮಾರು 50 ಆನೆಗಳು ಮಂಗಳವಾರ ರಾತ್ರಿ ಹಿಂಡಾಗಿ ಬಂದು ಬೆಳೆ ನಾಶ ಮಾಡಿವೆ. ಜಮೀನಿನಲ್ಲೇ ವಾಸ ಮಾಡುವ ನಮಗೆ ಭಯ ಆಗುತ್ತಿದೆ ಎಂದು ಅರಕಲವಾಡಿ ರೈತ ಹನುಮಯ್ಯ ಅತಂಕ ತೋಡಿಕೊಂಡಿದ್ದಾರೆ.

ಮೂರು ಗುಂಪಾಗಿವೆ ಆನೆಗಳ ಹಿಂಡು..
ತಮಿಳುನಾಡಿನ ಸತ್ಯಮಂಗಲ ಅರಣ್ಯದ ಜೀರಗಹಳ್ಳಿವಲಯದಿಂದ ಅರಳವಾಡಿ ಮಾರ್ಗ ವಾಗಿ ಅರಕಲವಾಡಿಗೆ ಬಂದಿದ್ದ ಹಿಂಡು ಆನೆಗಳನ್ನು ಓಡಿಸುವ ಸಂದರ್ಭ ದಲ್ಲಿ ಆನೆಗಳು 3ಗುಂಪುಗಳಾಗಿದ್ದು ಅದರಲ್ಲಿ ಆರು
ಅರಕಲವಾಡಿಯಲ್ಲಿಯೇ ಬೀಡು ಬಿಟ್ಟಿದ್ದವು. ಆನೆಗಳು ಹೋದ ಕಡೆಯಲ್ಲೆಲ್ಲಾ ಗಾಳಿಯಲ್ಲಿ ಗುಂಡು ಹಾರಿಸಿ ಪಟಾಕಿ ಸಿಡಿಸಿ ಓಡಿಸ ಲಾಯಿತು. ಕೆ.ಗುಡಿ, ಪುಣಜನೂರು, ನಗರ ಸೇರಿದಂತೆ ಮೂರೂ ವಲಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳನ್ನು ಬೆನ್ನತ್ತಿದ್ದರು. ಎಸಿಎಫ್ ಸುರೇಶ್, ಆರ್ ಎಫ್ ಒ ವಿನೋದ್ ಗೌಡ ಒಳಗೊಂಡಂತೆ ಆರ್ ಆರ್ ಟಿ ತಂಡ,ವಾಚರ್ ಮತ್ತು ಗಾರ್ಡ್ ಗಳು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.
ಆನೆಗಳನ್ನು ನಮ್ಮ ಸಿಬ್ಬಂದಿ ಕಾಡಿಗೆ ಅಟ್ಟುವಲ್ಲಿ ನಿರತರಾಗಿದ್ದಾರೆ. ಸಂಜೆಯಾದರೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಿ ಆರ್ ಟಿ. ಟೈಗರ್‌ ಪ್ರಾಜೆಕ್ಟ್ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!