ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಂದ ನಿರ್ದೇಶನ_
ರಾಜೇಶ್ ಬೆಂಡರವಾಡಿ
ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಅಸ್ಪತ್ರೆ ಕಟ್ಟಡದಲ್ಲಿ ಪುನರಾರಂಭಿಸಲಾಗಿರುವ ಒಪಿಡಿ ಹಾಗೂ ತುರ್ತು ಚಿಕಿತ್ಸಾ ವಿಭಾಗಗಳನ್ನು ಮುಚ್ಚುವ ಮಾತು ಸಂಬಂಧಿಸಿದ ಸಚಿವರಿಂದಲೇ ಕೇಳಿಬಂದಿದೆ!
ಪುನರಾರಂಭಿಸಿದ ಎರಡೇ ತಿಂಗಳಿಗೆ ಮುಚ್ಚುವ ಸೂಚನೆ ಕೊಟ್ಟಿರುವವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್.
ಅ.೨೭ರಂದು ಸುಧಾಕರ್ ಮೈಸೂರಿಗೆ ಆಗಮಿಸಿದ್ದಾಗ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆ(ಸಿಮ್ಸ್) ಡೀನ್ ಡಾ.ಜಿ.ಎಂ.ಸಂಜೀವ್ ಅವರಿಗೆ ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿಮ್ಸ್ ಮತ್ತು ಜಿಲ್ಲಾ ಆಸ್ಪತ್ರೆ ಇವೆರಡೂ ಕಡೆಗಳಲ್ಲಿ ಹೊರರೋಗಿ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗ ಇರುವುದರಿಂದ ರೋಗಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿವೆ ಎಂಬ ದೂರುಗಳಿವೆ. ಮುಖ್ಯವಾಗಿ ಎರಡೂ ಕಡೆಗಳಲ್ಲಿ ನಡೆಸುವುದರಿಂದ ಎಲ್ಲೂ ಪರಿಪೂರ್ಣ ಆರೋಗ್ಯ ಸೇವೆ ಒದಗಿಸಿದಂತೆ ಆಗುವುದಿಲ್ಲ. ಸಿಮ್ಸ್‌ಗೆಂದೇ ನೇಮಿಸಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಇಬ್ಭಾಗ ಮಾಡಿ ವೈದ್ಯಕೀಯ ಸೇವೆ ಒದಗಿಸುವುದು ಕಷ್ಟ ಎಂದು ಸಚಿವರು ಹೇಳಿದ್ದಾಗಿ ಗೊತ್ತಾಗಿದೆ.
ವೈದ್ಯರು ಸಿಮ್ಸ್ ಮತ್ತು ಜಿಲ್ಲಾಸ್ಪತ್ರೆಗೆ ಹೋಗಿಬಂದು ಮಾಡುವಂತಾಗಿದೆ. ಇದರಿಂದಲೂ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ರಾಜ್ಯದ ಎಲ್ಲೂ ಈತರದ ವ್ಯವಸ್ಥೆ ಇಲ್ಲ. ಎರಡೆರಡು ಕಡೆ ಆರೋಗ್ಯ ಸೇವೆ ನೀಡಲು ಮುಂದಾದರೆ ಸಿಮ್ಸ್ ಉದ್ದೇಶ ಈಡೇರುವುದಿಲ್ಲ ಎಂದು ಸ್ಪಷ್ಟವಾಗಿ ಸಚಿವರು ಡೀನ್‌ಗೆ ಹೇಳಿರುವುದಾಗಿ ಬಲ್ಲಮೂಲಗಳು ತಿಳಿಸಿವೆ.
ನಗರ ಹೊರವಲಯದ ಯಡಬೆಟ್ಟ ಬಳಿ ಇರುವ ಸಿಮ್ಸ್ ಆಸ್ಪತ್ರೆ ರಾಷ್ಟ್ರಪತಿ ಅವರಿಂದ ಉದ್ಘಾಟನೆಯಾಗಿ ೧ ವರ್ಷ ೧ತಿಂಗಳಾಗಿದ್ದು, ಇದಕ್ಕೂ ಮುಂಚೆ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಎಲ್ಲ ಆರೋಗ್ಯ ಸೇವೆಗಳೂ ದೊರೆಯುತ್ತಿದ್ದವು. ಸಿಮ್ಸ್ ಪ್ರಾರಂಭವಾಗುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಮಕ್ಕಳ ವಿಭಾಗ, ಸಿಟಿ ಸ್ಕ್ಯಾನ್ ಸೇವೆಗಳನ್ನು ಮಾತ್ರ ಉಳಿಸಲಾಗಿತ್ತು.
ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆ ಮತ್ತು ಹೊರಭಾಗದಲ್ಲಿರುವ ಸಿಮ್ಸ್ ನಡುವೆ ೭ ಕಿ.ಮೀ . ಅಂತರವಿದೆ. ಹೀಗಾಗಿ ಸಿಮ್ಸ್ ನೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲೂ ಒಪಿಡಿ ಹಾಗೂ ತುರ್ತು ಚಿಕಿತ್ಸಾ ವಿಭಾಗ ತೆರೆದು ರೋಗಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಸಂಘ-ಸಂಸ್ಥೆಗಳು ಹೋರಾಟ ಮಾಡಿದ್ದವು. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಮೇಲೂ ಒತ್ತಡ ಹಾಕಿದ್ದವು. ಈ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಅವರು ನೀಡಿದ್ದ ಕಡಕ್ ನಿರ್ದೇಶನದಂತೆ ಸೆ.೧೨ರಂದು ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಒಪಿಡಿ ಹಾಗೂ ತುರ್ತು ಚಿಕಿತ್ಸಾ ವಿಭಾಗಳನ್ನು ಪುನರಾರಂಭಿಸಲಾಗಿದ್ದು, ಆರೋಗ್ಯ ಸಚಿವರೇ ಈಗ ಮುಚ್ಚುವಂತೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಇರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯಿಂದ ಎರಡೂ ಕಡೆಗಳಲ್ಲಿ ದಿನದ ೨೪ ಗಂಟೆಗಳೂ ಒಪಿಡಿ ಮತ್ತು ತುರ್ತು ಚಿಕಿತ್ಸಾ ವಿಭಾಗಳನ್ನು ನಿರ್ವಹಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಪುನರಾರಂಭಿಸಿರುವ ಒಪಿಡಿ ಮತ್ತು ತುರ್ತು ವಿಭಾಗಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ.
-ಡಾ.ಜಿ.ಎಂ.ಸಂಜೀವ್, ಸಿಮ್ಸ್ ಡೀನ್.
ನಮ್ಮ ಕ್ಲಿನಿಕ್, ಆರೋಗ್ಯ ಕೇಂದ್ರಗಳಿಗೆ ಬಲ
ಎಲ್ಲೆಡೆ ಇರುವಂತೆ ಚಾಮರಾಜನಗರದಲ್ಲಿಯೂ ನಗರ ಆರೋಗ್ಯ ಕೇಂದ್ರಗಳಿವೆ. ಅದರ ಜೊತೆಗೆ ‘ನಮ್ಮ ಕ್ಲಿನಿಕ್’ ಅನ್ನು ಇದೇ ನವೆಂಬರ್‌ನಲ್ಲಿ ಚಾಮರಾಜನಗರದ ಕರಿನಂಜನಪುರ ಬಡಾವಣೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ತರಹದ ಆರೋಗ್ಯ ಸೇವೆ ಬಲಪಡಿಸಿ ಎಂದು ಆರೋಗ್ಯ ಸಚಿವರು ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.