ಕೊಳ್ಳೇಗಾಲ: ಮಗನೊಬ್ಬ ಸುಳ್ಳು ಹೇಳಿ ತಾಯಿಯಿಂದ ಆಸ್ತಿ ಬರೆಸಿಕೊಂಡ ಮೊಕದ್ದಮೆ ಸಂಬoಧ ವಿಚಾರಣೆಗೆಂದು ತಾಯಿಯನ್ನು ಮಂಚದ ಸಮೇತ ಪಟ್ಟಣದ ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಕರೆತಂದು ಹಾಜರುಪಡಿಸಿದ ಘಟನೆ ನಡೆದಿದೆ.
ಚಾಮರಾಜನಗರದ ಗಾಳಿಪುರ ಬಡಾವಣೆಯ ಮಮ್ತಾಜ್ ಬೇಗಂ (೭೫) ತಮ್ಮ ಕೊನೆಯ ಮಗ ಸಿ.ಎನ್.ಅಬ್ದುಲ್ ರಜಾಕ್ ವಿರುದ್ಧ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬoಧ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅನಾರೋಗ್ಯದಿಂದಾಗಿ ಮಮ್ತಾಜ್ ಬೇಗಂ ಅವರು ಕಳೆದ ೨ ತಿಂಗಳಿನಿoದ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಆದ್ದರಿಂದ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಲೇ ಬೇಕಾದ್ದರಿಂದ ತಮ್ಮ ಮಗಳಾದ ಸಿ.ಎನ್.ನೂರ್ ಆಯಿಷಾರ ಸಂಬoಧಿಕರ ನೆರವಿನಿಂದ ಮಂಚದ ಮೇಲೆ ಮಲಗಿಸಿಯೇ ಕರೆತರಲಾಗಿತ್ತು.
ಪತಿ ನಿಸಾರ್ ಅಹಮ್ಮದ್ ಪತ್ನಿಯಾದ ಮಮ್ತಾಜ್ ಹೆಸರಿಗೆ ೩.೨೮ ಎಕರೆ ಜಮೀನು ಬರೆದಿದ್ದರು. ಈ ದಂಪತಿಗೆ ೬ ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಕೊನೆಯ ಮಗ ಸಿ.ಎನ್.ಅಬ್ದುಲ್ ರಜಾಕ್ ಹಜ್ ಯಾತ್ರೆಗೆ ತೆರಳಲು ಪಾಸ್‌ಪೋರ್ಟ್ ಮಾಡಿಸಿಕೊಡುವುದಾಗಿ ತಾಯಿಯನ್ನು ನಂಬಿಸಿ ಸಹಿ ಹಾಕಿಸಿಕೊಂಡು ಆಕೆಯ ಜಮೀನನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಮಮ್ತಾಜ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಪೊಟೋವನ್ನು ನಮ್ಮ ಸಿಬ್ಬಂದಿ ನನಗೆ ತೋರಿಸಿದ್ದರು. ಇಂತಹ ಸ್ಥಿತಿಯಲ್ಲಿ ಕರೆತರುವುದು ಬೇಡ ಎಂದು ಹೇಳಿದ್ದೆ. ಆದರೂ ಅವರ ಮನೆಯವರು ಮಂಚದ ಸಮೇತ ಅವರನ್ನು ಕರೆ ತಂದಿದ್ದರು.
– ಗೀತಾ ಹುಡೇದ, ಉಪವಿಭಾಗಾಧಿಕಾರಿ, ಕೊಳ್ಳೇಗಾಲ