ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕಾಂಗ್ರೆಸ್ ದಲಿತ ಮುಖಂಡರಿಂದ ವರಿಷ್ಠರಿಗೆ ದೂರು
ಚಾಮರಾಜನಗರ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದ್ದು ಶಾಸಕ ಸಿ. ಪುಟ್ಟರಂಗಶೆಟ್ಟಿ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಪಕ್ಷದ ಮುಖಂಡರು ಬಹಿರಂಗವಾಗಿ ಸಭೆ ನಡೆಸಿದ್ದಾರೆ.
ಪುಟ್ಟರಂಗಶೆಟ್ಟಿ ವಿರುದ್ಧ ಬಂಡಾಯ ಸಾರಿರುವ ಪಕ್ಷದ ದಲಿತ ಮುಖಂಡರು ಪಕ್ಷದ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಚಾಮರಾಜನಗರ ಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿರುವ ಪುಟ್ಟರಂಗಶೆಟ್ಟಿ ಅವರು ದಲಿತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲಿ ದಲಿತರಿಗೆ ಸೂಕ್ತಸ್ಧಾನಮಾನಗಳನ್ನು ಕಲ್ಪಿಸುತ್ತಿಲ್ಲ. ಗುತ್ತಿಗೆ ಕೆಲಸಗಳನ್ನು ಹಣದ ಅಸೆಗಾಗಿ ಹೊರ ರಾಜ್ಯದವರಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಮುಖಂಡರು ದೂರಿದ್ದಾರೆ.
ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಪುಟ್ಟರಂಗಶೆಟ್ಟಿ ಅವರು ಫ್ಲೆಕ್ಸ್ ಹಾಕಿಸಲಿಲ್ಲ, ಕಾಟಾಚಾರಕ್ಕೆ ವಿಜಯೋತ್ಸವ ಮಾಡಲಾಯಿತು. ತಮ್ಮ ಚುನಾವಣೆಗೆ ಹಾಕುವಷ್ಟು ಶ್ರಮವನ್ನು ಬೇರೆಯವರ ಚುನಾವಣೆಗೆ ಹಾಕುವುದಿಲ್ಲ. ಇದಿರಂದಾಗಿ ಸ್ಧಳೀಯ ಸಂಸ್ಧೆಗಳು ಹಾಗೂ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಅಧಿಕಾರ
ಕಳೆದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಆರ್. ಧ್ರುವನಾರಾಯಣ ಅವರಿಗೆ ಹಿನ್ನಡೆಯಾಗುವಂತೆ ನೋಡಿಕೊಂಡರು. ಜಿಲ್ಲೆಯಲ್ಲಿ ಇತರರ ಬೆಳವಣಿಗೆಯನ್ನು ಸಹಿಸುತ್ತಿಲ್ಲ ಎಂದು ಮುಖಂಡರು
ಆರೋಪಿಸಿದ್ದಾರೆ.
ನಿರ್ಣಯ: ಚಾಮರಾಜನಗರ ಕ್ಷೇತ್ರದಲ್ಲಿ ದಲಿತರಿಗೆ ಟಿಕೆಟ್ ನೀಡಬೇಕು. ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್ ನೀಡಬಾರದು. ಉಪ್ಪಾರ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ತೀರ್ಮಾನಿಸಿದರೆ ಚಾಮರಾಜನಗರ ತಾಲೂಕಿಗೆ ಸೇರಿದ ಉಪ್ಪಾರ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ನಂಜನಗೂಡು ಪ್ರವಾಸಿ ಮಂದಿರದಲ್ಲಿ ಬುಧವಾರ ರಾತ್ರಿ ಮೈಸೂರು ಭಾಗದ ಉಸ್ತುವಾರಿ ಹೊತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರನ್ನು ಭೇಟಿ ಮಾಡಿರುವ ದಲಿತ ಮುಖಂಡರು ಪುಟ್ಟರಂಗಶೆಟ್ಟಿ ಅವರ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ಬೆಳೆವಣಿಗೆ ಬಗ್ಗೆ ಚರ್ಚಿಸಲು ಧ್ರುವನಾರಾಯಣ ಅವರು ಪುಟ್ಟರಂಗಶೆಟ್ಟಿ ಹಾಗೂ ಪಕ್ಷದ ದಲಿತ ಮುಖಂಡರ ಸಭೆ ಕರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಾಮರಾಜನಗರ ಕ್ಷೇತ್ರದಾದ್ಯಂತ ಗುಸು ಗುಸು ಚರ್ಚೆ ನಡೆಯುತ್ತಿದೆ.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ದಲಿತ ಸಮುದಾಯ ಹಾಗೂ ಪಕ್ಷದಲ್ಲಿರುವ ದಲಿತ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಶಾಸಕರಿಗೆ ಅನೇಕ ಬಾರಿ ಹೇಳಿದರೂ ಸಹ ಯಾವುದೇ ಪ್ರಯೋಜನೆ ಆಗಲಿಲ್ಲ. ಹೀಗಾಗಿ ಪಕ್ಷದ ಮುಖಂಡರು ಸಭೆ ಸೇರಿ ಶಾಸಕರ ಕಾರ್ಯವೈಖರಿ ಖಂಡಿಸಿ ಪಕ್ಷದ ಹೈಕಮಾಂಡ್‌ಗೆ ದೂರು ಸಲ್ಲಿಸಲು ತೀರ್ಮಾನಿಸಲಾಯಿತು.
ಸಿ.ಕೆ. ರವಿಕುಮಾರ್, ಕಾಂಗ್ರೆಸ್ ಮುಖಂಡರು, ಚಾಮರಾಜನಗರ