ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಚಾಮರಾಜನಗರ: ಉಚಿತ ಬಸ್ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಕರೆ ನೀಡಿದ್ದ ಕಾಲೇಜುಗಳ ಬಂದ್‌ಗೆ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿ ಬೆಂಬಲಿಸಿದರು.
ಒಕ್ಕೂಟದ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಡಿವಿಯೇಷನ್ ರಸ್ತೆ ಮೂಲಕ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಭುವನೇಶ್ವರಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಕುಂದುಕೊರತೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಪರೀಕ್ಷೆ ಮುಗಿದರೂ ಫಲಿತಾಂಶ ನೀಡದೆ ವಿಳಂಬ ಮಾಡುತ್ತಿದೆ. ಪರೀಕ್ಷಾ ಮತ್ತು ಪ್ರವೇಶಾತಿ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ವಿದ್ಯಾರ್ಥಿವೇತನ ನೀಡಿಲ್ಲ ಎಂದು ದೂರಿದರು.
ಎಲ್ಲ ವಿದ್ಯಾರ್ಥಿಗಳಿಗೂ ಬಸ್ ಪಾಸ್ ನೀಡಬೇಕು. ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಓಡಿಸಬೇಕು. ಶಾಲೆ, ಕಾಲೇಜುಗಳಲ್ಲಿ ಶೌಚಗೃಹ, ನೀರಿನ ವ್ಯವಸ್ಥೆ, ಬಸ್ ನಿಲ್ದಾಣ ನಿರ್ಮಿಸಬೇಕು. ಪ್ರವೇಶಾತಿ, ಪರೀಕ್ಷಾ ಶುಲ್ಕ ಕಡಿತ ಮಾಡಬೇಕು. ಕೂಡಲೇ ವಿದ್ಯಾರ್ಥಿವೇತನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸ್ವಾಮಿ, ಜಿಲ್ಲಾಧ್ಯಕ್ಷ ಮೋಹನ್, ಜಿಲ್ಲಾ ಕಾರ್ಯದರ್ಶಿ ದಿಲೀಪ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸೈಯದ್ ಮೊಸಾಯಿದ್, ಪದಾಧಿಕಾರಿಗಳಾದ ನಿತಿನ್, ಪಿ.ಮನು, ಮದನ್, ಯೋಗೇಶ್, ನಾಗಲಾಂಬಿಕೆ, ಮಮತಾ, ಚಂದನ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





