Mysore
26
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ : ಹೊನ್ನೂರು ಪ್ರಕಾಶ್

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿಗಳು ಬಂದಂತಹ ಸಂದರ್ಭದಲ್ಲಿ ಮೊದಲು ರೈತರ ಸಮಸ್ಯೆಗಳನ್ನು ಆಲಿಸಿ, ನಂತರ ಪ್ರಾಧಿಕಾರದ ಸಭೆ ನಡೆಸಿ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತ ಗಳಿಗೆ ಮುಖ್ಯಮಂತ್ರಿಯವರೇ ಹೊಣೆಗಾರರಾಗಿರುತ್ತಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು.

ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದ ರೈತರ ಸಂಘದ ಮುಖಂಡರುಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ, ತುಳಸಿಕೆರೆ, ಮೆಂದರೆ, ಕೊಂಬುಡಿಕ್ಕಿ, ನಾಗಮಲೆ, ಕೊಕ್ಕ ಬರೆ, ತುಳಸಿಕೆರೆ, ಗೊರಸಾಣೆ, ತೊಕೆರೆ ಸೇರಿದಂತೆ ಇನ್ನಿತರ ಗ್ರಾಮಗಳ ಜನರಿಗೆ ಅವಶ್ಯಕವಾದ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು, 124 ಸರ್ವೇ ನಂಬರ್ ನ ಜಮೀನುಗಳನ್ನು ಪ್ರತ್ಯೇಕವಾಗಿ ಪೋಡು ಮಾಡದೇ ಇರುವುದರಿಂದ ಈ ಭಾಗದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹತ್ತಾರು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಹಾಗೂ ಸಂಬಂಧಪಟ್ಟ ಸಚಿವರಿಗೂ ಮನವಿ ನೀಡಿದ್ದೇವೆ, ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದರು ಈ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸದೆ ಇರುವುದು ಶೋಚನೀಯ ಸಂಗತಿ ಎಂದು ಆಕ್ರೋಶ ಹೊರ ಹಾಕಿದರು.

ಹುಲಿ ಯೋಜನೆ ಕೈಬಿಡಬೇಕು : ಮಲೆ ಮಾದೇಶ್ವರ ವನ್ಯ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಯಾವುದೇ ಕಾರಣಕ್ಕೂ ಘೋಷಣೆ ಮಾಡಬಾರದು ಇದರಿಂದ ಈ ಭಾಗದ ಜನರಿಗೆ ಹಾಗೂ ಮಲೆ ಮಾದೇಶ್ವರ ಭಕ್ತರಿಗೆ ಅನಾನುಕೂಲವಾಗಲಿದೆ. ಸರ್ಕಾರ ಈ ಕೂಡಲೇ ಯೋಜನೆ ಕೈಬಿಡಬೇಕು ಇಲ್ಲದಿದ್ದರೆ ಎಲ್ಲ ರೀತಿಯ ಪ್ರತಿಭಟನೆಗೂ ನಾವು ಸಿದ್ಧವಿದ್ದೇವೆ ಎಂದು ಈ ಭಾಗದ ರೈತರು ಎಚ್ಚರಿಕೆ ನೀಡಿದರು.

ಸಾರಿಗೆ ವ್ಯವಸ್ಥೆ ಕಲ್ಪಿಸಿ : ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗಾನತ ತುಳಸಿಕೆರೆ ಮೆಂದರೆ ಗ್ರಾಮಗಳಿಂದ ಪ್ರತಿದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು 15 ರಿಂದ 20 ಕಿಲೋ ಮೀಟರ್ ಗಳವರೆಗೆ ಶಾಲೆಗೆ ನಡೆದುಕೊಂಡು ಹೋಗಿ ಮತ್ತೆ ನಡೆದುಕೊಂಡು ಬರಬೇಕಿದೆ. ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಕೆಲವೊಮ್ಮೆ ವನ್ಯ ಪ್ರಾಣಿಗಳ ಉಪಟಳದಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಈ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಪ್ರಾಧಿಕಾರದ ಸಭೆಯಲ್ಲಿ ಘೋಷಣೆ ಮಾಡಬೇಕು : ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುವ ಯೋಜನೆಗಳನ್ನು ಪ್ರಾಧಿಕಾರದ ಸಭೆಯಲ್ಲಿ ಘೋಷಣೆ ಮಾಡಬೇಕು ಇಲ್ಲದಿದ್ದರೆ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತದಾನ ಬಹಿಷ್ಕಾರ : ಕಾಡಂಚಿನ ಗ್ರಾಮಗಳಿಗೆ ಅವಶ್ಯಕವಾದ ಮೂಲಭೂತ ಸೌಲಭ್ಯಗಳನ್ನು ಎರಡು ತಿಂಗಳೊಳಗೆ ದೊರಕಿಸಿಕೊಡದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಸಭೆಯಲ್ಲಿ ನಿರ್ಣಯ ಮಾಡಿಕೊಂಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು. ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ದೊರಕಿಸಿ ಕೊಡುವರೆ ಕಾದುನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!