Mysore
23
scattered clouds

Social Media

ಸೋಮವಾರ, 12 ಜನವರಿ 2026
Light
Dark

ಚಾ.ನಗರ : ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ಬಿಎಸ್ಪಿ ಸ್ಪರ್ಧೆ

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಾಗಯ್ಯ ಹೇಳಿಕೆ

ಚಾಮರಾಜನಗರ: ಬಹುಜನ ಸಮಾಜ ಪಕ್ಷದಿಂದ ಜಿಲ್ಲೆಯ ೪ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಕೊಳ್ಳೇಗಾಲ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸಿ ಗೆಲುವಿಗೆ ಶ್ರಮ ವಹಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಗಯ್ಯ ತಿಳಿಸಿದರು.
ಪಕ್ಷದ ವರಿಷ್ಠರಾದ ಮಾಯಾವತಿ ಅವರ ನಾಯಕತ್ವದಲ್ಲಿ ಮತ್ತು ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶಯದ ಮೇಲೆ ನಂಬಿಕೆಯಿಟ್ಟು ರಾಜ್ಯದ ೨೨೪ ಕ್ಷೇತ್ರಗಳಿಗೆ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಪಕ್ಷದ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಕೆಗೆ ಡಿ.25 ಕೊನೆಯ ದಿನವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕನಿಷ್ಠ ೨೫ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದೆ. ಅದಕ್ಕಾಗಿ ಎಲ್ಲ ತಯಾರಿಗಳು ನಡೆದಿದೆ. ಪಕ್ಷದ ವರಿಷ್ಠರು ಸಹ ಆಸಕ್ತಿ ವಹಿಸಿದ್ದಾರೆ ಎಂದು ಹೇಳಿದರು.
ದೇಶ ಹಾಗೂ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿ ಗಮನಿಸಿದರೆ ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವ ಕೆಲಸ ನಡೆಯುತ್ತಿದೆ. ಕೋಮುವಾದವನ್ನು ಹುಟ್ಟುಹಾಕಿ ಜನರ ನಡುವೆ ಕಂದಕ ನಿರ್ಮಿಸಲಾಗುತ್ತಿದೆ. ಜನರ ಪರ ಕೆಲಸಗಳನ್ನು ಮಾಡದೆ ಕೆಲವು ಶ್ರೀಮಂತ ವ್ಯಕ್ತಿಗಳ ಸೇವೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶವನ್ನು ಆಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಈ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸರ್ವರಿಗೂ ಸಮಪಾಲು, ಸಮಬಾಳು ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.
ಕೋಮುವಾದ, ಭ್ರಷ್ಟತೆ, ಆಡಳಿತಾರೂಢರ ನಿರ್ಲಕ್ಷ್ಯ, ಸಮಾಜದಲ್ಲಿರುವ ಜೀವಂತ ಸಮಸ್ಯೆಗಳ ಬಗ್ಗೆ ಪಕ್ಷವು ಜನರಿಗೆ ಮನವರಿಕೆ ಮಾಡಿಕೊಡಲಿದೆ. ಇತರೆ ಪಕ್ಷಗಳ ಜನವಿರೋಧಿ ನಿಲುವುಗಳ ಕುರಿತು ಅರಿವು ಮೂಡಿಸಲಿದೆ ಎಂದರು.
ಡಿ.27 ರಂದು ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಸಂಘಟಕರಾದ ಆಕಾಶ್ ಆನಂದ್ ಆವರು ಚುನಾವಣೆ ಸಂಬAಧ ಪಕ್ಷದ ಮುಖಂಡರ ಹಾಗೂ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ತಾಲ್ಲೂಕು ಉಪಾಧ್ಯಕ್ಷ ಗಗನ್‌ಚಂದ್ರಶೆಟ್ಟಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!