Mysore
28
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

‘ಪರಿಹಾರಕ್ಕಿಂತ ದನದ ಕೊಟ್ಟಿಗೆ ನಿರ್ಮಿಸಿಕೊಡಿ’

ದೇವನೂರಿನಲ್ಲಿ ಹುಲಿ ನಿರಂತರ ದಾಳಿಗೆ ೮ ರಾಸುಗಳು ಬಲಿ; ಮಹಿಳೆಯಿಂದ ಅರಣ್ಯ ಇಲಾಖೆಗೆ ಮನವಿ

ಗೋಣಿಕೊಪ್ಪಲು: ನಿರಂತರ ಹುಲಿ ದಾಳಿಯಿಂದ ಬಾಳೆಲೆ ಸಮೀಪದ ದೇವನೂರು ಗ್ರಾಮದ ಸ್ವಾತಿ ಕುಟ್ಟ್ಂಯು ಎಂಬವರ ೮ ಜಾನುವಾರುಗಳು ಬಲಿಯಾಗಿದ್ದು, ಸುವಾರು ೨ ಲಕ್ಷ ರೂ.ಗಳಿಗೂ ಅಧಿಕ ನಷ್ಟವುಂಟಾಗಿದೆ. ಹೀಗಾಗಿ ೫-೧೦ ಸಾವಿರದ ಹಣದ ಪರಿಹಾರ ನಮಗೆ ಬೇಡ, ಕೊಟ್ಟಿಗೆಯನ್ನು ಅರಣ್ಯ ಇಲಾಖೆಯೇ ಕಟ್ಟಿಸಿಕೊಡುವ ಮೂಲಕ ಮುಂದೆ ಹುಲಿ ದಾಳಿ ನಡೆಯದಂತೆ ತಡೆಯಲಿ ಎಂದು ಸ್ವಾತಿ ಕುಟ್ಟಯ್ಯ ಆಗ್ರಹಿಸಿದರು.

ಹುಲಿ ಸಂರಕ್ಷಿತ ಪ್ರದೇಶದಿಂದ ಸಮೀಪದ ಗ್ರಾಮಗಳಿಗೆ ನುಸುಳುವ ಹುಲಿಗಳು ಜಾನುವಾರು, ಹಂದಿ, ಮೇಕೆ ಇತ್ಯಾದಿ ಸಾಕುಪ್ರಾಣಿಗಳನ್ನು ಕೊಂದು ತಿನ್ನುವುದು ಸಹಜ. ೧೦ ವರ್ಷಗಳಿಂದೀಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ನಿರಂತರವಾಗಿ ಹುಲಿ, ಚಿರತೆ, ಕಾಡಾನೆ, ಕಾಡುಕೋಣ, ಕಾಡುಹಂದಿ ಇತ್ಯಾದಿ ವನ್ಯಜೀವಿಗಳು ಆಹಾರ ಅರಸಿ ಅರಣ್ಯದ ಅಂಚಿನ ಗ್ರಾಮಗಳಿಗೆ ನುಸುಳಿ ಬರುತ್ತಿದ್ದು, ಕೃಷಿಕ ವರ್ಗ ನಿರಂತರ ನಷ್ಟ ಅನುಭವಿಸುತ್ತಾ ಬಂದಿದೆ.

ದೇವನೂರು ಗ್ರಾಮದ ಪೋಡವಾಡ ಸ್ವಾತಿ ಕುಟ್ಟಯ್ಯ ಹಲವಾರು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ಇವರ ೮ ರಾಸುಗಳನ್ನು ಹುಲಿ ಕೊಂದಿದೆ. ರಾಸುಗಳನ್ನು ಹುಲಿ ಹಿಡಿದ ಬಗ್ಗೆ, ಪಶು ವೈದ್ಯರು ವರದಿ ನೀಡಿದ ಬಗ್ಗೆ ಅರಣ್ಯ ಇಲಾಖೆಯಲ್ಲಿ ಮಾಹಿತಿ ಇದ್ದರೂ ಇಲ್ಲಿಯವರೆಗೆ ಯಾವ ಪರಿಹಾರವೂ ಅರಣ್ಯ ಇಲಾಖೆಯಿಂದ ಸಿಕ್ಕಿಲ್ಲ.

ಇತ್ತೀಚೆಗೆ ಸ್ವಾತಿ ಕುಟ್ಟಯ್ಯ ಎಂಬವದರ ತೋಟಕ್ಕೆ ನಾಗರಹೊಳೆಯ ಚಾತರಕುಪ್ಪ ಅರಣ್ಯ ಪ್ರದೇಶದಿಂದ ಹುಲಿಯೊಂದು ಬಂದಿದ್ದು, ಹಸುವನ್ನು ಕೊಂದು ಹಾಕಿದೆ. ಮತ್ತಿಗೋಡು ವಲಯಾರಣ್ಯಾಧಿಕಾರಿ ಪಿ.ಸಿ.ದಿಲೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೀಘ್ರದಲ್ಲಿಯೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಇನ್ನೂ ಪರಿಹಾರ ದೊರಕಿಲ್ಲ.

ಹಸು ಕಟ್ಟಿ ಹಾಕುವ ಕೊಟ್ಟಿಗೆ ದುರಸ್ತಿಗೊಳಗಾಗಿದ್ದು, ಜಾನುವಾರುಗಳನ್ನು ಸಮೀಪದ ಮರವೊಂದರ ಬುಡದಲ್ಲಿಯೇ ಕಟ್ಟುತ್ತಿದ್ದರು. ಇದರಿಂದ ಹುಲಿಗೆ ಬೇಟೆ ಸುಲಭವಾಗಿದೆ. ಹಸುಗಳು ಹುಲಿಗೆ ಆಹಾರವಾದಾಗಲೆಲ್ಲಾ ಸ್ವಾತಿ ಕುಟ್ಟಯ್ಯ ನಮಗೆ ಉತ್ತಮ ಕೊಟ್ಟಿಗೆ ನಿರ್ಮಾಣ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಈಗಿರುವ ಕೊಟ್ಟಿಗೆಯನ್ನೇ ದುರಸ್ತಿ ವಾಡಿ ಉತ್ತಮ ಕೊಟ್ಟಿಗೆ ನಿರ್ಮಾಣ ಮಾಡಿದ್ದಲ್ಲಿ ರಾತ್ರಿ ಹುಲಿಗೆ ಹಸು ಬೇಟೆ ಅಸಾಧ್ಯ. ಸುಮಾರು ೮ ಜಾನುವಾರುಗಳಿಂದ ಸ್ವಾತಿ ಕುಟ್ಟಯ್ಯನವರಿಗೆ ರೂ.೨ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ನಮಗೆ ಉತ್ತಮ ಕೊಟ್ಟಿಗೆ ನಿರ್ಮಾಣ ಮಾಡಿಕೊಡಿ ಎಂದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸ್ವಾತಿ ಕುಟ್ಟಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ನಿರ್ಲಕ್ಷವೇ ಹುಲಿ ದಾಳಿ ಹೆಚ್ಚಾಗಲು ಕಾರಣ. ೮ ಜಾನುವಾರು ಬಲಿಯಾದರೂ ನಮಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ನಮಗೆ ಕೊಟ್ಟಿಗೆಯನ್ನಾದರೂ ಕಟ್ಟಿಕೊಡುವ ಮೂಲಕ ಹೈನುಗಾರಿಕೆಗೆ ಅವಕಾಶ ಕಲ್ಪಿಸಿ. ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಸ್ವಾತಿ ಕುಟ್ಟಯ್ಯ ಅವರ ಪುತ್ರ ಅಯ್ಯಪ್ಪ ನಾಚಯ್ಯ ಕೂಡ ಆಗ್ರಹಿಸಿದ್ದಾರೆ.

ಹುಲಿ ಕೊಂದಿರುವ ಹಸುವನ್ನು ಹೂತು ಹಾಕದೆ ಹಾಗೆಯೇ ಬಿಟ್ಟಿದ್ದರಿಂದ ಹುಲಿ ರಾತ್ರಿ ವೇಳೆ ಮೂರು ಬಾರಿ ಬಂದು ಮಾಂಸವನ್ನು ಭಕ್ಷಿಸಿರುವುದು ಕ್ಯಾಮೆರಾ ಟ್ರಾಪಿಂಗ್‌ನಲ್ಲಿ ಸೆರೆಯಾಗಿದೆ. ಹುಲಿ ದಾಳಿ ಮಾಡುವುದನ್ನು ತಪ್ಪಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಕನಿಷ್ಟ ಪಕ್ಷ ಕೊಟ್ಟಿಗೆ ದುರಸ್ತಿ ಮಾಡುವ ಮೂಲಕ ಇರುವ ಜಾನುವಾರುಗಳನ್ನಾದರೂ ಉಳಿಸಲಿ. -ಪೋಡವಾಡ ಸ್ವಾತಿ ಕುಟ್ಟ್ಂಯು, ಜಾನುವಾರು ಕಳೆದುಕೊಂಡವರು

ಇತ್ತೀಚೆಗೆ ಮೃತಪಟ್ಟ ಹಸುವಿಗೆ ಪರಿಹಾರ ನೀಡಬಹುದಾಗಿದೆ. ಕೊಟ್ಟಿಗೆ ನಿರ್ಮಾಣಕ್ಕೆ ಶೇ.೫೦ರಷ್ಟು ಮಾತ್ರ ನಾವು ನೀಡುತ್ತೇವೆ. ಉಳಿದ ಮೊತ್ತ ಮಾಲೀಕರೇ ಭರಿಸಬೇಕಾಗುತ್ತದೆ. -ದಿಲೀಪ್, ವಲಯಾರಣ್ಯಾಧಿಕಾರಿ, ಆನೆಚೌಕೂರು ವನ್ಯಜೀವಿ ವಲಯ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!