Mysore
25
light rain

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಗೆಲುವು ಅಸಾಧ್ಯ: ಶಾಸಕ ಜಿಟಿಡಿ

ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಜಯಪ್ರಕಾಶ್ ಚಿಕ್ಕಣ್ಣ ಹೆಸರು ಶಿಫಾರಸು
ಮೈಸೂರು: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗೆ ಪ್ರಯತ್ನ ಮಾಡುತ್ತಲೇ ಬಂದಿದ್ದರೂ ಸಾಧ್ಯವಾಗಿಲ್ಲ. ಮುಂಬರುವ ಚುನಾವಣೆಯಲ್ಲೂ ಜಾ.ದಳ ಸೋಲಿಸಲಾಗದು. ಪ್ರಾದೇಶಿಕ ಪಕ್ಷ ಉಳಿಸುವ ಜತೆಗೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಲು ಜಾ.ದಳದ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಿಂದ ಆರಂಭವಾದ ಪಂಚರತ್ನ ರಥಯಾತ್ರೆಯು ಬೀದರ್ ಜಿಲ್ಲೆಯಲ್ಲಿ ಮುಂದುವರಿದಿದೆ. ಮಂಡ್ಯ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಮಾರ್ಚ್ ತಿಂಗಳಲ್ಲಿ ಮೈಸೂರಿನಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ ಎಂದರು.
ಕೆ.ಆರ್.ನಗರ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ತಿ.ನರಸೀಪುರದಲ್ಲಿ ಹಾಲಿ ಶಾಸಕರು ಇದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಗೆಲ್ಲಲು ಶಕ್ತಿಮೀರಿ ಶ್ರಮಿಸಲಾಗುವುದು. ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಜಯಪ್ರಕಾಶ್ ಚಿಕ್ಕಣ್ಣ ಅವರಿಗೆ ಟಿಕೆಟ್ ಕೊಡುವಂತೆ ಸರ್ವಾನುಮತದಿಂದ ಶಿಫಾರಸು ಮಾಡಲಾಗಿದೆ. ಜ.೧೫ರ ನಂತರ ಜಯಪ್ರಕಾಶ್ ಅವರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಜಯಪ್ರಕಾಶ್ ಚಿಕ್ಕಣ್ಣ ಗೆಲ್ಲುವ ಕಾರಣ ಜಿಲ್ಲೆಯ ಎಲ್ಲ ನಾಯಕರೂ ಒಬ್ಬರನ್ನೇ ಶಿಫಾರಸು ಮಾಡಿದ್ದೇವೆ ಎಂದರು.
ಮುತ್ಸದ್ಧಿಗಳ ಬಾಯಲ್ಲಿ ಬರಬಾರದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ಅವರವರ ಕ್ಷೇತ್ರಗಳಲ್ಲಿ ಗೆಲ್ಲಲಾಗದವರು ರಾಜ್ಯ, ರಾಷ್ಟ್ರೀಯ ವಿಚಾರಗಳನ್ನು ಮಾತನಾಡುತ್ತಾರೆ. ನಾಯಿಗೆ ಇರುವ ನಿಯತ್ತು ಮನುಷ್ಯರಿಗಿಲ್ಲ. ಯಾರೇ ಆಗಿದ್ದರೂ ಇತಿಮಿತಿಯಲ್ಲಿ ಅರ್ಥ ಮಾಡಿಕೊಂಡು ಮಾತನಾಡಬೇಕು. ಸಿದ್ದರಾಮಯ್ಯ ಅವರು ಮುತ್ಸದ್ಧಿ ರಾಜಕಾರಣಿ. ಅವರ ಬಾಯಲ್ಲಿ ಇಂತಹ ಮಾತುಗಳು ಬರಬಾರದಾಗಿತ್ತು ಎಂದು ಹೇಳಿದರು. ಸ್ಯಾಂಟ್ರೋ ರವಿ ಬಗ್ಗೆ ಪ್ರಶ್ನಿಸಿದ್ದಕ್ಕೆ, ನನಗೆ ಆ ಲೈನ್ ಯಾವುದೂ ಗೊತ್ತಿಲ್ಲ. ಏನು ಗೊತ್ತಿಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!