ಚಾಮರಾಜನಗರ: ನಂಜನಗೂಡು ತಾಲ್ಲೂಕಿನ ಬಿಳುಗಲಿ ಗ್ರಾಮದ ತಾಯಿ-ಮಗಳ ಕೊಲೆ ಪ್ರಕರಣವನ್ನು ಮೈಸೂರು ಜಿಲ್ಲಾಡಳಿತ ಮತ್ತು ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಮಾಜವಾದಿ ಜನತಾ ಪಕ್ಷದ ಅಧ್ಯಕ್ಷ ಜಿ.ಎಂ.ಗಾಡ್ಕರ್ ಆಗ್ರಹಿಸಿದ್ದಾರೆ.
೧೨೬ ದಿನಗಳ ಹಿಂದೆ ಗ್ರಾಮದ ಪುಟ್ಟರಂಗಮ್ಮ ಮತ್ತು ಆಕೆಯ ಮಗಳು ಮಣಿ ಎಂಬುವರ ಮೇಲೆ ಗುಂಪೊoದು ಹಲ್ಲೆ ಮಾಡಿದ್ದಲ್ಲದೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದೆ. ಬಳಿಕ ಇಬ್ಬರ ಶವವನ್ನು ಸೀರೆಯಿಂದ ಒಟ್ಟಿಗೆ ಬಿಗಿದು ಸಮೀಪದಲ್ಲಿದ್ದ ನೀರಿನ ಹಳ್ಳಕ್ಕೆ ಎಸೆದು ಹತ್ಯೆ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೊಲೆಯಾದ ೫ ದಿನಗಳ ನಂತರ ತಾಯಿ-ಮಗಳ ದೇಹ ಮೇಲೆದ್ದವು. ವಿಷಯ ತಿಳಿದ ಸ್ಥಳೀಯ ಪೊಲೀಸರು ಮೃತ ದೇಹಗಳನ್ನು ತಹಶೀಲ್ದಾರ್ ಅವರಿಂದ ಮಹಜರು ಮಾಡಿಸಲಿಲ್ಲ. ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸದೆ ಆತುರದಲ್ಲಿ ಸುಟ್ಟು ಹಾಕಿದ್ದಾರೆ. ಈ ಭಯಾನಕ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಕ್ರೈಂ ನ್ಯೂಸ್‌ಗೂ ಪ್ರಕಟಣೆಗೂ ನೀಡದೆ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ದೂರಿದರು.
ಈ ಪ್ರಕರಣವನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಕುಮಾರ ಎಂಬಾತನ ನೇತೃತ್ವದಲ್ಲಿ ಸುಟ್ಟು ಹಾಕಲಾಗಿದೆ. ಇಲ್ಲಿಯ ತನಕ ಡಿವೈಎಸ್ಪಿ ಗೋವಿಂದರಾಜು, ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಎಸ್‌ಐ. ಆರತಿ ಅವರು ಒಬ್ಬ ಆರೋಪಿಯನ್ನು ಬಂಧಿಸಿಲ್ಲ ಎಂದು ಆಪಾದಿಸಿದರು.





