Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ವರ್ಣರಂಜಿತ ತೆರೆ

ಮೈಸೂರು: ‘ಭಾರತೀಯತೆ’ಶೀರ್ಷಿಕೆಯಡಿ ರಂಗಾಯಣದ ಆವರಣದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಗುರುವಾರ ಸಂಜೆ ಸಂಭ್ರಮದ ತೆರೆ ಬಿದ್ದಿದೆ.
ಬಹುರೂಪಿಯನ್ನು ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ರಂಗಾಯಣದ ಕಲಾವಿದರ ತಂಡ ಹಾಗೂ ರಂಗಾಸಕ್ತರು ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತರ ಪುತ್ಥಳಿ ಎದುರು ಕಲಾವಿದರು ತಾಯಿ ಭಾರತೀಯ ಪಾದ ಪದ್ಮಗಳಿಗೆ ನಮಿಸೋಣ ಬನ್ನಿ… ಗೀತೆಯನ್ನು ಹಾಡುವುದರೊಂದಿಗೆ ಬಹುರೂಪಿಗೆ ತೆರೆ ಎಳೆಯಲಾಯಿತು.
ಬಳಿಕ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಕೊಡವ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು. ನೆರೆದಿದ್ದವರು ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದರು. ಮೂರು ನಾಟಕಗಳ ಪ್ರದರ್ಶನಗೊಂದಿಗೆ ಬಹುರೂಪಿ ಮುಕ್ತಾಯಗೊಂಡಿತು.
ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣಗೊಳಿಸಿದ ಈ ಬಾರಿಯ ಬಹುರೂಪಿಯಲ್ಲಿ ಒಂಬತ್ತು ದಿನಗಳ ಕಾಲ ಕನ್ನಡ, ಮಲಯಾಳಂ, ಬಂಗಾಳಿ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಯ ನಾಟಕಗಳು, ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು. ಇಷ್ಟೇ ಅಲ್ಲದೆ ಕರಕುಶಲ ಪ್ರದರ್ಶನ, ಪುಸ್ತಕ ಪ್ರದರ್ಶನ, ಚಲನಚಿತ್ರೋತ್ಸವ, ವರ್ಣಚಿತ್ರ ಪ್ರದರ್ಶನ, ರಾಷ್ಟ್ರೀಯ ವಿಚಾರಗೋಷ್ಠಿಗಳು ಗಮನ ಸೆಳೆದವು.
ಮೂರು ರಂಗಮಂದಿರಗಳಲ್ಲಿ ಏಳು ರಾಜ್ಯಗಳ ಏಳು ವಿವಿಧ ಭಾಷೆಗಳ ನಾಟಕಗಳು, ಕನ್ನಡದ 12 ನಾಟಕಗಳು ಮತ್ತು ತುಳು ನಾಟಕವು ಸೇರಿ ಒಟ್ಟು 20 ನಾಟಕಗಳು ಪ್ರದರ್ಶನಗೊಂಡವು.
ಮ್ಯಾಂಡಸ್ ಚಂಡಮಾರುತದ ಪರಿಣಾಮ ನಾಲ್ಕು ದಿನಗಳು ಬಹುರೂಪಿ ರಂಗೋತ್ಸವ ಜನರಿಲ್ಲದೇ ಭಣಗುಟ್ಟಿತು. ಕೊನೆಯ ಎರಡು ದಿನಗಳು ಮಳೆ ಬಿಡುವು ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಿದರು.
ಕೊನೆಯ ದಿನ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ದಿವಾಕರ ಹೆಗಡೆ ತಂಡದವರು ತಾಳಮದ್ದಳೆಯಲ್ಲಿ ಸ್ವಾಮಿ ವಿವೇಕಾನಂದರು ಚಿಗಾಗೋ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನ ಕನ್ಯಾಕುಮಾರಿ ಭೂಶಿರದಲ್ಲಿ ನಿಂತು ಸಂಕಲ್ಪ ಮಾಡಿದ ಸಂದರ್ಭವನ್ನು ಪ್ರಸ್ತುತಪಡಿಸಿದರು.

ವನರಂಗದಲ್ಲಿ ನಡೆದ ಮೈಸೂರಿನ ಕೆ.ಎನ್.ಮಹೇಶ್ ತಂಡದವರು ವೀರಗಾಸೆ ನೃತ್ಯ ಪ್ರದರ್ಶಿಸಿದರು. ತಮಟೆ ಸದ್ದಿಗೆ ಸುತ್ತಾಕಾರದಲ್ಲಿ ಕತ್ತಿ ಹಿಡಿದು ಬೀಸುತ್ತಾ ನರ್ತಿಸುತ್ತಾ ಸಭಿಕರಿಂದ ಪ್ರಶಂಸೆ ಪಡೆದರು.
ತದನಂತರ ಕೊಡಗಿನ ಸೂರಜ್ ತಂಡದವರು ಬೊಳಕಾಟ್ ನೃತ್ಯ ಪ್ರದರ್ಶಿಸಿದರು. ಕೊಡಗಿನಲ್ಲಿ ಆಚರಿಸುವ ಉತ್ತರಿ ಹಬ್ಬದ ಸಂದರ್ಭದಲ್ಲಿ ನರ್ತಿಸುವ ಉತ್ತರಿ ಕೋಲಾಟಕ್ಕೆ ರಂಗಾಸಕ್ತರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ