-ಶಿವಾನಂದ ತಗಡೂರು, ಹಿರಿಯ ಪತ್ರಕರ್ತರು
ಅದೇ ಜೇಬುಗಳಿಲ್ಲದ ಬಿಳಿ ಜುಬ್ಬ, ಬಿಳಿ ಪಂಚೆ ಧರಿಸಿದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮಾಮೂಲಿ ಚಪ್ಪಲಿ ಮೆಟ್ಟಿಕೊಂಡು ನಡೆದು ಬರುತ್ತಿದ್ದರೆ, ಅವರ ಮುಖದಲ್ಲಿನ ತೇಜಸ್ಸು ಸಂತ ಎಂದೇ ಪ್ರತಿಬಿಂಬಿಸುತಿತ್ತು.ನನಿಜ.
ಸಿದ್ದೇಶ್ವರ ಶ್ರೀಗಳ ಪ್ರವಚನಗಳನ್ನು ಕೇಳಿದವರು ಅವರನ್ನು ಸಂತ ಎಂದು ಎದೆಯೊಳಗೆ ಭಕ್ತಿಯ ಅಪ್ಪುಗೆಯಲ್ಲಿ ಧ್ಯಾನಿಸಿದವರು ಕೋಟ್ಯಾನುಕೋಟಿ…
ಘಟನೆ 1
ವಿಜಯಪುರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನದ ಸಿದ್ದತಾ ಸಭೆಗೆ ಹೋಗಿದ್ದೆ. ಸಭೆಯಲ್ಲಿ ಸಮ್ಮೇಳನದ ಸಾನಿಧ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರದ್ದಾಗಬೇಕು ಎಂದು ಸರ್ವಸಮ್ಮತ ಅಭಿಪ್ರಾಯ ಮೂಡಿಬಂತು. ಸಮ್ಮೇಳನಕ್ಕೆ ಸಾನಿಧ್ಯ ವಹಿಸುವ ಕೋರಿಕೆ ಸಲ್ಲಿಸಿ ಬರೋಣ ಎಂದು ವಿಜಯಪುರ ಜಿಲ್ಲಾ ಪತ್ರಕರ್ತರ ಜತೆಗೆ ಹೊರಟೆ. ವಿಜಯಪುರದಿಂದ ಮುಕ್ಕಾಲು ಗಂಟೆ ಪಯಣ. ಕಾಖಂಡಕಿ ಗ್ರಾಮದ ಸಮೀಪ ಬೋರೆಯ ಮೇಲೆ ಪ್ರವಚನ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಅಕ್ಷರಶಃ ಒಬ್ಬ ಸಂತ ಹೇಗಿರಬೇಕು ಎನ್ನುವುದನ್ನು ಅಲ್ಲಿ ಸಿದ್ದೇಶ್ವರ ಶ್ರೀ ತೋರಿಸಿಕೊಟ್ಟಿದ್ದರು. ಅಲ್ಲಿ ಯಾವುದೇ ಹೋಟೆಲ್ ವಗೈರೆ ಏನೂ ಇರಲಿಲ್ಲ. ದೊಡ್ಡ ಆಲದ ಮರದ ಬಳಿ ಚಿಕ್ಕದಾದ ಮನೆ. ಅಲ್ಲಿಯೇ ನೆಲ ಸಮತಟ್ಟು ಮಾಡಲಾಗಿತ್ತು. ಇನ್ನು ಉಳಿದವರಿಗೆ ಕುಟೀರಗಳನ್ನು ನಿರ್ಮಿಸಿ ನೆಲೆ ಕಲ್ಪಿಸಲಾಗಿತ್ತು. ಒಂದೆಡೆ ಭಜನೆ, ಮತ್ತೊಂದೆಡೆ ಉಪದೇಶ, ಮಾರ್ಗದರ್ಶನ ನಡೆದಿದ್ದವು. ಅಷ್ಟೇ ಅಲ್ಲ, ಬಂದವರಿಗೆ ಊಟೋಪಚಾರ ಎಲ್ಲವೂ ಅಲ್ಲಿತ್ತು.
ಸ್ವಾಮೀಜಿ ಹುಡುಕುತ್ತಾ ಕಾಖಂಡಕಿಗೆ ಅಂದು ಹೋದಾಗ ಅಲ್ಲಿ ಆದ ಅನುಭವ ಮರೆಯಲಾಗದು.
ರಾಜ್ಯ ಪತ್ರಕರ್ತರ ಸಮ್ಮೇಳನದ ಬಗ್ಗೆ ಅವರೊಂದಿಗೆ ಮಾತನಾಡಿ, ಸಾನಿಧ್ಯ ವಹಿಸಿಕೊಳ್ಳಲು ಅರಿಕೆ ಮಾಡಿಕೊಂಡವು. ಒಪ್ಪುತ್ತಾರೊ ಇಲ್ಲವೊ ಎನ್ನುವ ಆತಂಕವಿತ್ತು. ಆದರೆ, ಖುಷಿಯಿಂದ ಒಪ್ಪಿದರು. ರಾಜ್ಯ ಪತ್ರಕರ್ತರ ಸಮ್ಮೇಳನ ಬಿಜಾಪುರದಲ್ಲಿಯೇ ಮಾಡಿ. ಈ ಭಾಗದಲ್ಲಿ ನಮ್ಮ ಜನರು ಎಲ್ಲಾ ರೀತಿಯ ಸಹಕಾರ ಕೊಡ್ತಾರ, ಸಮ್ಮೇಳನ ಚೆಂದವಾಗಿ ನಡೆಯಲಿದೆ ಎಂದು ಹಾರೈಸಿದರು.
ಘಟನೆ ೨
೨೦೦೩ ರಲ್ಲಿ ಹೊಸದಿಲ್ಲಿಯಲ್ಲಿ ಸುತ್ತೂರು ಮಠದ ಇಂಜಿನಿಯರಿಂಗ್ ಕಾಲೇಜು ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ರಾಷ್ಟಪತಿ ಅಬ್ದುಲ್ ಕಲಾಂ ಅವರ ಜೊತೆಗೆ ವೇದಿಕೆಯಲ್ಲಿ ಇದ್ದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ. ಅವರ ಮಾತಿಗೆ, ವಿಚಾರ ಲಹರಿಗೆ ಅನಾಮತ್ತಾಗಿ ಮನಸೋತಿದ್ದೆ. ಅಲ್ಲಿಂದಲೇ ಅವರ ಸುತ್ತಲೂ ಮನಸ್ಸು ಗಿರಕಿ ಹೊಡೆಯುತ್ತಲಿತ್ತು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣ ಕಾದು ಓದುತ್ತಿದ್ದವರಲ್ಲಿ ನಾನು ಒಬ್ಬ.
ಈ ಎರಡೂ ಘಟನೆಗಳ ನಡುವೆ ಸುತ್ತೂರು ಮಠದ ಕಾರ್ಯಕ್ರಮ ಸೇರಿದಂತೆ ಹಲವಾರು ಬಾರಿ ಅವರ ಮಾತಿಗೆ ಕಿವಿಯಾಗಿದ್ದೇನೆ. ಪ್ರವಚನ ಆಲಿಸಿದ್ದೇನೆ. ಒಂದು ಕ್ಷಣ ಕೂಡ ಅವರ ಬಗ್ಗೆ ನನಗಿದ್ದ ಅಖಂಡ ಧನ್ಯತಾ ಭಾವ ಕಡಿಮೆ ಆಗಲಿಲ್ಲ, ಬದಲಿಗೆ ಹೆಚ್ಚಾಗುತ್ತಲೇ ಹೋಯಿತು.
ಎಲ್ಲವೂ ಬೇಕು ಎನ್ನುವ ಮನಸ್ಸುಗಳ ನಡುವೆ ಪದವಿ ಪುರಸ್ಕಾರ, ಪ್ರಶಸ್ತಿಗಳು ಬೇಡ ಎಂದು ನಿರ್ಲಿಪ್ತವಾಗಿ ಬಯಲ ಆಲಯದ ಕಡೆಗೆ ಮುಖ ಮಾಡಿ, ತನ್ನ ಬದುಕನ್ನು ಆದರ್ಶಮಯವಾಗಿಸಿಕೊಂಡ ಇಂತಹ ಸಂತರು ಅಪರೂಪ.





