Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನನ್ನ ಹೋರಾಟದ ಹಿಂದೆ ನೂರಾರು ಕೈಗಳು, ಕಣ್ಣುಗಳು, ಹೃದಯಗಳ ಬೆಂಬಲವಿದೆ- ಪದ್ಮಶ್ರೀ ಸೋಮಣ್ಣ

ಮೈಸೂರು : ನನ್ನ ಹೋರಾಟದ ಹಿಂದೆ ನೂರಾರು ಕೈಗಳು, ಕಣ್ಣುಗಳು ಹಾಗೂ ಹೃದಯಗಳ ಬೆಂಬಲವಿದೆ ಎಂದು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಆದಿವಾಸಿ ನಾಯಕ ಎಚ್.ಡಿ. ಕೋಟೆ ತಾಲೂಕು ಮೊತ್ತ ಹಾಡಿಯ ಸೋಮಣ್ಣ ಹೇಳಿದರು.

ಕುವೆಂಪುನಗರದ ಕೆ ಬ್ಲಾಕಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಕಲ್ಪತರು ಚಾರಿಟಬಲ್ ಟ್ರಸ್ಟಿನಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆಗಷ್ಟೇ ಜೀತದಿಂದ ವಿಮುಕ್ತನಾಗಿದ್ದ ನಾನು ಮೊದಲಿಗೆ ನನ್ನ ಹೋರಾಟ ದಲಿತ ಸಂಘರ್ಷ ಸಮಿತಿಯ ಮೂಲಕ ಆರಂಭವಾಯಿತು. ಚಾ. ನಂಜುಂಡಮೂರ್ತಿ, ಬೆಟ್ಟಯ್ಯ ಕೋಟೆ ಅವರೊಂದಿಗೆ ಸೇರಿ ಹೋರಾಟಕ್ಕಿಳಿದೆ.

ನಂತರ ಕ್ಷೀರಸಾಗರ ಜೊತೆಯಾದರು. ಈ ಹೋರಾಟದಲ್ಲಿ ನೂರಾರು ಕೈಗಳು, ಕಣ್ಣುಗಳು, ಹೃದಯಗಳು ಬೆಂಬಲಿಸಿದ್ದರಿಂದ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದರು.

ಕಳೆದ ಐದು ದಶಕಗಳಿಂದ ಆದಿವಾಸಿಗಳ ಹಕ್ಕಗಳಿಗಾಗಿ ಹೋರಾಟ ಮಾಡುತ್ತಾ ಬಂದರೂ ಇನ್ನೂ ಹಲವಾರು ಸಮಸ್ಯೆಗಳು ಹಾಗೆಯೇ ಉಳಿದಿವೆ. ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು.

ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಬೇಕು. ಆದಿವಾಸಿಗಳ ಮಕ್ಕಳ ಕಲಿಕೆಗೆ ಪ್ರತ್ಯೇಕ ವಿವಿ ಸ್ಥಾಪಿಸಬೇಕು. ಈ ಮಕ್ಕಳು ಕೂಡ ಪಿಎಚ್.ಡಿ. ಪಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಸೋಮಣ್ಣ ಅವರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಟ್ರಸ್ಟಿನ ಅಧ್ಯಕ್ಷ ಡಾ. ಅಮ್ಮಸಂದ್ರ ಸುರೇಶ್, ಕಾರ್ಯದರ್ಶಿ ಜಗದೀಶ್ ಆರ್. ತುಂಗಾ, ಉಪಾದ್ಯಕ್ಷ ಪಿ. ಕುಮಾರ್, ಖಜಾಂಚಿ ಪುರುಷೋತ್ತಮ, ಟ್ರಸ್ಟಿ ಲಕ್ಷ್ಮೀಕಾಂತ, ಮಹದೇವ ಮೊದಲಾದವರು ಸೋಮಣ್ಣ  ಅವರನ್ನು ಸನ್ಮಾನಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ