ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದ ನಿರ್ಬಂಧಿತ ಪ್ರದೇಶದ ಸೂಕ್ಷ್ಮ ಅರಣ್ಯ ಪರಿಸರ ವ್ಯಾಪ್ತಿಗೆ ಒಳಪಡುವ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆಯಲ್ಲಿ ಯುವಕರು ಕುಡಿದು ಮೋಜು-ಮಸ್ತಿಯಲ್ಲಿ ತೊಡಗಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಿರೀಕೆರೆಯು ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಕಾರಣ ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರಾಕರಿಸಲಾಗಿದೆ. ಆದರೆ ಕೆರೆ ವೀಕ್ಷಣೆ ಮಾಡುವ ನೆಪದಲ್ಲಿ ಕೋಡಿ ಸ್ಥಳದಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ.
ನಿರ್ಬಂಧಿತ ಪ್ರದೇಶ: ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಗೆ ಬರುವ ಹಿರೀಕೆರೆ ಸೂಕ್ಷ್ಮ ಪರಿಸರ ಪ್ರದೇಶವಾಗಿರುವ ಹಿನ್ನೆಲೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಲಾಗಿದೆ. ಸ್ಥಳೀಯರು ಮತ್ತು ಕೆರೆ ವೀಕ್ಷಣೆಗೆ ಇತರೆಡೆಯಿಂದ ಬರುವ ಪ್ರವಾಸಿಗರು ಕೆರೆಗೆ ನೋಡಲು ತೆರಳಿದ ವೇಳೆ ಅರಣ್ಯ ಸಿಬ್ಬಂದಿ ಒಳಗೆ ಬಿಡುವುದಿಲ್ಲ. ಹೀಗಿದ್ದರೂ ಮೋಜು ಮಸ್ತಿ ಮಾಡಲು ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆ ಎದ್ದಿದೆ.
ಬಂಡೀಪುರ ಅಭಯಾರಣ್ಯದ ವಾಹನಗಳನ್ನು ಹೊರತುಪಡಿಸಿದ ಹಿರೀಕೆರೆ ಸೂಕ್ಷ್ಮ ಪರಿಸರ ವಲಯದಲ್ಲಿ ಖಾಸಗಿ ವ್ಯಕ್ತಿಗಳ ಬೈಕ್, ಕಾರು ಸೇರಿದಂತೆ ಇನ್ನಿತರ ವಾಹನಗಳು ತೆರಳಲು ಅವಕಾಶವಿಲ್ಲ. ಆದರೆ ಅಧಿಕಾರಿಗಳ ಕೃಪಕಟಾಕ್ಷದಿಂದ ಕೆಲವು ಮಂದಿ ತಮ್ಮ ವಾಹನದ ಸಮೇತ ಬೀಡುಬಿಟ್ಟು ಮಸ್ತಿಯಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅರಣ್ಯಾಧಿಕಾರಿಗಳ ಈ ನಿರ್ಲಕ್ಷ್ಯವನ್ನು ಕಂಡು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.