Mysore
26
clear sky

Social Media

ಭಾನುವಾರ, 12 ಜನವರಿ 2025
Light
Dark

ಬಿ.ರಾಚಯ್ಯ ಜೋಡಿ ರಸ್ತೆ ಹೆಸರು ಬಳಕೆಗೆ ಹಿಂದೇಟು

ನಗರಸಭೆಯ ದ್ವಂದ್ವಾತ್ಮಕ ನಿಲುವು; ಮಾಜಿ ರಾಜ್ಯಪಾಲರ ಹೆಸರಿನ ಹೆಬ್ಬಾಗಿಲು ನಿರ್ಮಾಣ ಎಂದು?

ಎ.ಎಸ್.ಮಣಿಕಂಠ
ಚಾಮರಾಜನಗರ: ಈ ನಾಡು ಕಂಡ ಧೀಮಂತ ರಾಜಕಾರಣಿ ಬಿ.ರಾಚಯ್ಯ ಅವರ ಹೆಸರಿನ ಜೋಡಿ ರಸ್ತೆಯಲ್ಲಿ ಬಿ.ರಾಚಯ್ಯ ಜೋಡಿ ರಸ್ತೆ ಎಂದು ಹೆಸರು ಬಳಸಲು ಹಲವಾರು ಮಳಿಗೆಗಳು ಹಿಂದೇಟು ಹಾಕುತ್ತಿದ್ದು, ನಗರಸಭೆಯ ದ್ವಂದ್ವ ನೀತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜೋಡಿ ರಸ್ತೆ

ನಗರದ ಪಚ್ಚಪ್ಪ ವೃತ್ತದಿಂದ ಪ್ರಾರಂಭವಾಗಿ ರಾಮಸಮುದ್ರ ಗ್ರಾಮಾಂತರ ಪೊಲೀಸ್ ಠಾಣೆಯವರೆಗೆ ಇರುವ ಜೋಡಿ ರಸ್ತೆಗೆ ಬಿ.ರಾಚಯ್ಯ ಜೋಡಿ ರಸ್ತೆ ಎಂದು ಘೋಷಿಸಲಾಗಿದ್ದು, ಇಂದಿಗೂ ರಸ್ತೆಯ ಎರಡೂ ಬದಿಗಳಲ್ಲಿರುವ ಸಾಕಷ್ಟು ಮಳಿಗೆಗಳು ನಾಮಫಲಕದಲ್ಲಿ ಬಿ.ರಾಚಯ್ಯ ಜೋಡಿ ರಸ್ತೆ ಎಂದು ಬರೆದರೆ, ಕೆಲವು ಮಳಿಗೆಗಳು ನಗರಸಭೆಯ ದ್ವಂದ್ವ ನಿಲುವಿನಿಂದ ಬಿ.ರಾಚಯ್ಯ ಜೋಡಿ ರಸ್ತೆ ಎಂದು ನಾಮ ಫಲಕದಲ್ಲಿ ಹೆಸರು ಹಾಕಲು ಹಿಂದೇಟು ಹಾಕುತ್ತಿವೆ.
ಚಾ.ನಗರ ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿ, ಇಂದಿಗೂ ಈ ಭಾಗದ ಜನರಿಗೆ ಆದರ್ಶ ರಾಜಕಾರಣಿ ಎನಿಸಿಕೊಂಡಿರುವ ದಲಿತ ನಾಯಕ, ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ನೆನಪಿಗಾಗಿ ನಗರದಲ್ಲಿನ ಜೋಡಿ ರಸ್ತೆಗೆ ಹೆಸರಿಟ್ಟು, ಅವರ ಹೆಸರಿನಲ್ಲಿ ಹೆಬ್ಬಾಗಿಲು ನಿರ್ಮಿಸಿ, ಪ್ರತಿಮೆ ಸ್ಥಾಪಿಸುವ ಕ್ರಮ ಕೈಗೊಂಡಿದ್ದರು. ಆದರೆ ಇಂದಿಗೂ ಅದು ನೇಪಥ್ಯಕ್ಕೆ ಸರಿದಿರುವುದಕ್ಕೆ ಬಿ.ರಾಚಯ್ಯ ಅವರ ಹಲವಾರು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ದ್ವಂದ್ವ ನಿಲುವು: ನಗರಸಭೆಯಿಂದಲೇ ಈ ಮೊದಲು ಬಿ.ರಾಚಯ್ಯ ಜೋಡಿ ರಸ್ತೆ ಎಂಬ ಹೆಬ್ಬಾಗಿಲನ್ನು ನಿರ್ಮಾಣ ಮಾಡಿ ಅವರ ಹೆಸರಿನ ರಸ್ತೆ ಎಂದು ನಾಮಕರಣ ಮಾಡಿದ್ದರು. ನಗರಸಭೆ ನೀಡುವ ಉದ್ದಿಮೆ ಪರವಾನಗಿ ಪತ್ರದಲ್ಲಿ ಇನ್ನೂ ಬಿ.ಆರ್.ಹಿಲ್ಸ್ ರಸ್ತೆ ಎಂದು ನಮೂದಿಸಲಾಗಿದೆ. ಮಾಜಿ ರಾಜ್ಯಪಾಲ, ದಲಿತ ನಾಯಕರಾದ ಬಿ.ರಾಚಯ್ಯ ಅವರ ಕುರಿತು ನಗರಸಭೆ ದ್ವಂದ್ವ ನಿಲುವು ಹೊಂದಿರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಹೆಬ್ಬಾಗಿಲು ನಿರ್ಮಾಣವೆಂದು?: ಈ ಮೊದಲು ಭುವನೇಶ್ವರಿ ವೃತ್ತದ ಬಳಿ ಇದ್ದ ಬಿ.ರಾಚಯ್ಯ ಜೋಡಿ ರಸ್ತೆ ಹೆಬ್ಬಾಗಿಲನ್ನು ಸಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ತೆರವುಗೊಳಿಸಿದ್ದು, ಈವರೆಗೂ ಅದನ್ನು ಮರು ಸ್ಥಾಪಿಸಲು ನಗರಸಭೆ ಮುಂದಾಗಿಲ್ಲ. ಭುವನೇಶ್ವರಿ ವೃತ್ತದ ಬಳಿ ಒಂದು ಚಿಕ್ಕ ಬೋರ್ಡ್ ಅಳವಡಿಸಿ ಕೈತೊಳೆದುಕೊಂಡಿದ್ದು, ನಗರಸಭೆ ದಲಿತ ನಾಯಕರಿಗೆ ಮಾಡಿರುವ ಅಪಮಾನ ಎಂದು ಸಾರ್ವಜನಿಕರಾದ ನವೀನ್ ಬೇಸರ ವ್ಯಕ್ತಪಡಿಸಿದ್ದಾರೆ.


ಬಿ.ರಾಚಯ್ಯ ಅವರ ಮೇಲೆ ನಮಗೆ ಅಪಾರ ಗೌರವವಿದೆ. ನಗರೋತ್ಥಾನ ೋಂಜನೆಯಡಿ ಅವರ ಹೆಸರಿನ ಹೆಬ್ಬಾಗಿಲು ಹಾಗೂ ಪ್ರತಿಮೆ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ. ಬಿ.ರಾಚಯ್ಯ ಜೋಡಿ ರಸ್ತೆ ಎಂದು ನಮೂದಿಸಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು.
-ಆಶಾ ನಟರಾಜ್, ಅಧ್ಯಕ್ಷರು, ನಗರಸಭೆ..


ಉದ್ಯಮೆ ಪರವಾನಗಿಯಲ್ಲಿ ಬಿ.ಆರ್.ಹಿಲ್ಸ್ ಜೋಡಿ ರಸ್ತೆ ಎಂದು ಬರೆಯುವ ಮೂಲಕ ನಗರಸಭೆ ಬಿ.ರಾಚಯ್ಯ ಅವರಿಗೆ ಅಪಮಾನವೆಸಗಿದೆ. ಈ ಕೂಡಲೇ ಅದನ್ನು ಸರಿಪಡಿಸಿ ಅವರ ಹೆಸರಿನ ಹೆಬ್ಬಾಗಿಲು ಹಾಗೂ ಪ್ರತಿಮೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು.
-ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಂಬೇಡ್ಕರ್ ಸೇನೆ.


ಪರವಾನಗಿ ಪಡೆದುಕೊಳ್ಳುವ ಅರ್ಜಿದಾರರು ಕೆಲವೊಂದು ಬಾರಿ ಬಿ.ಆರ್.ಹಿಲ್ಸ್ ರಸ್ತೆ ಎಂದು ನೀಡಿರುತ್ತಾರೆ. ಈ ಕುರಿತು ಕ್ರಮ ವಹಿಸಲಾಗುವುದು.
-ನಟರಾಜ್, ಪ್ರಭಾರ ಆಯುಕ್ತರು, ನಗರಸಭೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ