ಮೈಸೂರು: ನಗರದ ಆಡಳಿತ ತರಬೇತಿ ಸಂಸ್ಥೆಯ (ಎಐಟಿ) ಅತಿಥಿ ಗೃಹದಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತೆಗೆದುಕೊಂಡು ಹೋಗಿದ್ದು, ಅವುಗಳನ್ನು ವಾಪಸ್ಸು ನೀಡುವಂತೆ ಸಂಸ್ಥೆಯು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿದೆ.
ಆಡಳಿತ ತರಬೇತಿ ಸಂಸ್ಥೆ ಅತಿಥಿ ಗೃಹದಲ್ಲಿ 2020ರಲ್ಲಿ ವಾಸ್ತವ್ಯ ಹೂಡಿದ್ದ ಅಧಿಕಾರಿ ರೋಹಿಣಿ ಸಿಂಧೂರಿ, ಅಲ್ಲಿನ 12 ಬಗೆಯ 20 ವಸ್ತುಗಳನ್ನು ಜಿಲ್ಲಾಧಿಕಾರಿ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದು, ಅವುಗಳನ್ನು ವಾಪಸ್ ಕೊಡುವಂತೆ ಸಂಸ್ಥೆಯು ಪತ್ರದಲ್ಲಿ ತಿಳಿಸಿದೆ.
ಸಂಸ್ಥೆಯ ಜಂಟಿ ನಿರ್ದೇಶಕರ ಕಚೇರಿಯಿಂದ ನ.30ರಂದು ಪತ್ರ ಬರೆಯಲಾಗಿದೆ. ಹೀಗೆ ಪತ್ರ ಬರೆಯುತ್ತಿರುವುದು ಇದು 4ನೇ ಬಾರಿಯಾಗಿದೆ. 2020ರ ಡಿ.16, 2021ರ ಜ.8 ಹಾಗೂ ಏ.21ರಲ್ಲೂ ಸಂಸ್ಥೆ ಪತ್ರ ಬರೆದಿತ್ತು ಎಂದು ತಿಳಿದುಬಂದಿದೆ.
2020ರ ಅ.2ರಿಂದ 2020ರ ನ.14ರವರೆಗೆ ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಜಿಲ್ಲಾಧಿಕಾರಿ ನಿವಾಸಕ್ಕೆ ವಸ್ತುಗಳನ್ನು ಸ್ಥಳಾಂತರಿಸುವಾಗ ಅತಿಥಿಗೃಹದ 2 ಟೆಲಿಫೋನ್ ಟೇಬಲ್, 2 ಬಟ್ಟೆ ಹ್ಯಾಂಗರ್, 2 ಬೆತ್ತದ ಕುರ್ಚಿ, 2 ಟೆಲಿಫೋನ್ ಸ್ಟೂಲ್, 2 ಟೀಪಾಯಿ, ಒಂದು ಮೈಕ್ರೋವೇವ್ ಒವನ್, ರಿಸೆಪ್ಶನ್ ಟೆಲಿಫೋನ್ ಸ್ಟೂಲ್, ಮಂಚ, ಹಾಸಿಗೆ, 2 ಪ್ಲಾಸ್ಟಿಕ್ ಕುರ್ಚಿ, 2 ಯೋಗಾ ಮ್ಯಾಟ್, 2 ಸ್ಟೀಲ್ ಜಗ್ ಕೊಂಡೊಯ್ದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರೋಹಿಣಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ಪತ್ರ ಬರೆದಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಿಲ್ಲಾಧಿಕಾರಿ ನಿವಾಸದಲ್ಲಿ ಪರಿಕರಗಳು ಇದ್ದಲ್ಲಿ, ವಾಪಸ್ ನೀಡುವಂತೆ ಇದೀಗ ಮತ್ತೊಮ್ಮೆ ಕೋರಲಾಗಿದೆ.





