ಮೈಸೂರು: ಗಿರವಿ ಇಟ್ಟಿದ್ದ ಕೋಟ್ಯಾಂತರ ರೂ. ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಾರುತಿ ಜ್ಯುವಲರ್ಸ್ ಮಾಲೀಕನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.
ನೇಮಿಚಂದ್ ಎಂಬಾತನೇ ಬಂಧಿತ ಆರೋಪಿ. ಈತ ರಾಜಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದ ಅಲ್ಲಿಗೆ ತೆರಳಿದ್ದ ತನಿಖಾ ತಂಡ ಶೋಧ ನಡೆಸಿ, ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಹಿನ್ನೆಲೆ: ವಿವೇಕಾನಂದ ನಗರ ಸರ್ಕಲ್ ಬಳಿ ಮಾರುತಿ ಜ್ಯುವಲರ್ಸ್ ಚಿನ್ನಾಭರಣ ಅಂಗಡಿ ತೆರೆದು ಸಾರ್ವಜನಿಕರಿಂದ ಚಿನ್ನಾಭರಣಗಳನ್ನು ಗಿರವಿ ಇಟ್ಟು ಕೊಂಡು ಸಾಲ ಸೌಲಭ್ಯ ನೀಡುತ್ತಿದ್ದ. ಲಕ್ಕಿ ಡಿಪ್ ನಡೆಸುವ ಮೂಲಕ ಸಾರ್ವಜನಿಕರಿಂದ ಕೋಟ್ಯಾಂತರ ರೂ. ಹಣ ಸಂಗ್ರಹಿಸಿದ್ದ. ಒಂದುವರೆ ತಿಂಗಳ ಹಿಂದೆ ಕುಟುಂಬ ಸಮೇತ ಪರಾರಿಯಾಗಿದ್ದ. ಈ ಸಂಬಂಧ ಗ್ರಾಹಕರು ನೀಡಿದ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದರು.
ರಾಜಸ್ಥಾನದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಕುವೆಂಪು ನಗರ ಠಾಣೆ ಪೊಲೀಸರು, ಸ್ಥಳೀಯ ಪೊಲೀಸರ ಸಹಕಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





