Mysore
19
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಸ್ಮಶಾನ ಇಲ್ಲದೆ ಹಳ್ಳದಲ್ಲಿ ಅಂತ್ಯಸಂಸ್ಕಾರ ಮಾಡಿದ ಅಂಬಿಕಾಪುರ ಗ್ರಾಮಸ್ಥರು

ಹನೂರು: ತಾಲ್ಲೂಕಿನ ಅಜ್ಜೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಆದಿ ಜಾಂಬವ ಸಮುದಾಯದವರಿಗೆ ಸ್ಮಶಾನ ವ್ಯವಸ್ಥೆಯಿಲ್ಲದೆ ಮೃತಪಟ್ಟ ವ್ಯಕ್ತಿಯನ್ನು ಉಡುತೊರೆ ಹಳ್ಳದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.

ಗ್ರಾಮದಲ್ಲಿ ಆದಿ ಜಾಂಬವ ಮತ್ತು ಪರಿಶಿಷ್ಟ ಜಾತಿ ಸಮುದಾಯದವರಿಗೆ ಸ್ಮಶಾನ ವ್ಯವಸ್ಥೆ ಇಲ್ಲ. ನಮ್ಮ ಸಮುದಾಯದ ವ್ಯಕ್ತಿ ಸತ್ತರೇ ನಮಗೆ ಅಂತ್ಯಕ್ರಿಯೆ ಮಾಡಲು ಉಡುತೊರೆ ಹಳ್ಳವೇ ಗತಿ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ನಮಗೆ ಸ್ಮಶಾನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ವಾರ ಗ್ರಾಮದ ಪಾಪಮ್ಮ ಅವರ ಮಗ ಷಣ್ಮುಗ ಎಂಬುವವರು ಮೃತಪಟ್ಟಿದ್ದರು. ಸ್ಮಶಾನವಿಲ್ಲದೇ ಉಡುತೊರೆ ಹಳ್ಳದ ಬಳಿ ಅಂತ್ಯಕ್ರಿಯೆ ಮಾಡಲಾಗಿತ್ತು. ಸತತ ಮಳೆಯಿಂದಾಗಿ ಉಡುತೊರೆ ಹಳ್ಳ ತುಂಬಿ ಹರಿದ ಪರಿಣಾಮ ಹೂತು ಹಾಕಿದ್ದ ಶವವೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಈ ಮಧ್ಯೆ ಶನಿವಾರ ಪಳನಿಯಮ್ಮ(54) ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಯನ್ನು ಉಡುತೊರೆ ಹಳ್ಳದಲ್ಲೇ ಮಾಡಲಾಗಿದೆ. ಮತ್ತೊಮ್ಮೆ ಹಳ್ಳ ತುಂಬಿ ಹರಿದರೆ ಈ ಶವವೂ ನೀರಿನಲ್ಲಿ ಕೊಚ್ಚಿಹೋಗುವ ಆತಂಕದಲ್ಲಿದ್ದಾರೆ ಗ್ರಾಮಸ್ಥರು.

ಗ್ರಾಮದಲ್ಲಿ ನಮಗೆ ಸ್ಮಶಾನವಿಲ್ಲ ಸತ್ತವರನ್ನು ಹಳ್ಳದಲ್ಲೇ ಅಂತ್ಯಕ್ರಿಯೆ ಮಾಡುವಂತಾಗಿದೆ. ದಯವಿಟ್ಟು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮಗೆ ಯಾವುದೆ ಸೌಲಭ್ಯ ಕೊಡದಿದ್ದರೂ ಸ್ಮಶಾನ ವ್ಯವಸ್ಥೆ ಕಲ್ಪಿಸುವ ಮೂಲಕ ಸತ್ತವರಿಗೆ ಮುಕ್ತಿ ಕಲ್ಪಿಸಿ ಎಂದು ಈಚೆಗೆ ಮೃತಪಟ್ಟ ಷಣ್ಮುಖ ಅವರ ತಾಯಿ ಗೊಳಾಡುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.

ಗ್ರಾಮದ ಸಾರ್ವಜನಿಕರಿಗೆ ಸೂಕ್ತ ಸ್ಮಶಾನ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಇದಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಮಶಾನ ವಿಲ್ಲದ ಗ್ರಾಮಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ.ಈಗಾಗಲೇ ಸರ್ಕಾರಿ ಜಮೀನು ಇರುವ ಕಡೆ ಸರ್ವೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಆದಷ್ಟು ಬೇಗ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಕಲ್ಪಿಸಲಾಗುವುದು.

ಆನಂದಯ್ಯ
ತಹಸೀಲ್ದಾರ್ ಹನೂರು ತಾಲ್ಲೂಕು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!