ಮೈಸೂರು: ಕುಕ್ಕರಹಳ್ಳಿ ಕೆರೆ ಏರಿಯಲ್ಲಿನ ನೀರು ಸೋರಿಕೆಯಿಂದ ಯಾವುದೇ ಅಪಾಯವಿಲ್ಲ. ಆದರೆ, ಕೆರೆಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ವ್ಯವಸ್ಥಿತವಾಗಿ ರಾಕ್‌ಟೋಗಳನ್ನು ಮತ್ತು ಹೆಡ್ ರೆಗ್ಯುಲೇಟರ್ ಅಳವಡಿಸಬೇಕು ಎಂಬ ಎರಡು ಪ್ರಮುಖ ಅಂಶಗಳನ್ನು ಕಾವೇರಿ ನೀರಾವರಿ ನಿಗಮದ ಡಿಸೈನ್ ವಿಂಗ್ ತಂಡ ಇಂಜಿನಿಯರ್‌ಗಳು ತಿಳಿಸಿದ್ದಾರೆ.
ನಿಗಮದ ಡಿಸೈನ್ ವಿಂಗ್‌ನ ತಾಂತ್ರಿಕ ಸಲಹೆಗಾರ ಎಚ್.ಕೆ.ಸಂಪತ್ ಕುಮಾರ್ ನೇತೃತ್ವದ ತಂಡ ಸೋಮವಾರ ಕುಕ್ಕರಹಳ್ಳಿ ಕೆರೆಯನ್ನು ಸುತ್ತು ಹಾಕಿ ಪರಿಶೀಲನೆ ನಡೆಸಿದೆ. ಶನಿವಾರವಷ್ಟೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಇಂಜಿನಿಯರ್‌ಗಳ ತಂಡ ಪರಿಶೀಲನೆ ನಡೆಸಿ, ಮಣ್ಣಿನ ಪರೀಕ್ಷೆ ಮಾಡಿ ವರದಿ ನೀಡುವುದಾಗಿ ಹೇಳಿದ್ದು, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳ ತಂಡ ನೀರು ಜಿನುಗುವ ಜಾಗದಲ್ಲಿ ಮತ್ತು ಬಂಡ್‌ಗಳಲ್ಲಿ ರಾಕ್‌ಟೋಗಳನ್ನು ಮಾಡುವಂತೆ ತಿಳಿಸಿದೆ.
ರಾಕ್‌ಟೋ ಎಂದರೇನು?: ಕೆರೆಯ ಏರಿಯಲ್ಲಿ ಎಲ್ಲಿ ನೀರು ಜಿನುಗುತ್ತದೆ. ಎಲ್ಲ ಬಂಡ್‌ಗಳಲ್ಲಿ ರಾಕ್‌ಟೋಗಳನ್ನು ನಿರ್ಮಿಸಲು ತಂಡ ಸಲಹೆ ನೀಡಿದೆ. ಜಿನುಗುವ ನೀರು ಬಸಿದು ಹೋಗಲು ಅನುಕೂಲವಾಗುವಂತೆ ಮಾಡುವ ಕಲ್ಲಿನ ಕಟ್ಟಡವೇ ರಾಕ್‌ಟೋ. ಇದನ್ನು ಕಲ್ಲಿನಲ್ಲಿಯೇ ಮಾಡಬೇಕು. ಕಾಂಕ್ರೀಟ್ ಬಳಸುವಂತಿಲ್ಲ.
ಹೆಡ್ ರೆಗ್ಯುಲೇಟರ್ ಅಳವಡಿಕೆ : ಮಳೆಯು ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಹೋಗುವಂತೆ ಮಾಡಲು ಈಗಿರುವ ಕೊಂಟ(ಸ್ಲೂಸೈ ಗೇಟ್) ನ ಬದಲಾಗಿ ಹೆಡ್ ರೆಗ್ಯುಲೇಟರ್ ಅನ್ನು ಅಳವಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹೋಗಲು ಅನುಕೂಲವಾಗುತ್ತದೆ. ಆದರೆ, ಹೀಗೆ ನೀರನ್ನು ಹೊರ ಬಿಟ್ಟಾಗ, ನೀರಿನಿಂದ ದೋಬಿ ಘಾಟ್‌ಗೆ ಯಾವುದೇ ತೊಂದರೆಯಾಗದಂತೆ ನಗರ ಪಾಲಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ರಾಕ್‌ಟೋ ಮತ್ತು ಹೆಡ್ ರೆಗ್ಯುಲೇಟರ್ ಅನ್ನು ಹೇಗೆ ಮಾಡಬೇಕು ಎಂಬ ಕುರಿತು ವಾರದೊಳಗೆ ವರದಿ ನೀಡುವುದಾಗಿ ತಿಳಿಸಿದೆ.
ಕಾವೇರಿ ನೀರಾವರಿ ನಿಗಮದ ಡಿಸೈನ್ ವಿಂಗ್‌ನ ಎಇಇಗಳಾದ ಎಂ.ಎನ್.ಚಂದ್ರೆಶೇಖರ್, ಗೋವರ್ಧನ್, ಸೋಮಶೇಖರ್, ಮೈಸೂರು ವಿವಿಯ ಇಂಜಿನಿಯರ್‌ಗಳಾದ ಇಇ ಪ್ರತಾಪ್, ಎಇಇ ಶಿವಲಿಂಗಪ್ರಸಾದ್ ಇದ್ದರು.





