Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಆಂದೋಲನ ಸಂದರ್ಶನ : ‘ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ’

‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಡಿಡಿಪಿಯು ನಾಗಮಲ್ಲೇಶ್ ಮಾಹಿತಿ

ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ವರ್ಷದಿಂದ ವರ್ಷಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಫಲಿತಾಂಶ ಹೆಚ್ಚಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರ್ಯ ಪ್ರವೃತ್ತವಾಗಿದ್ದು, ವಿಶೇಷ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಮುಂದಾಗಿದೆ.
ಈ ಕುರಿತು ‘ಆಂದೋಲನ’ ದಿನಪತ್ರಿಕೆ ನಡೆಸಿದ ಕಿರು ಸಂದರ್ಶನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗಮಲ್ಲೇಶ್ ಮಾತನಾಡಿ, ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ೧೦ರೊಳಗೆ ಸ್ಥಾನ ಪಡೆಯಬೇಕೆಂಬ ದೃಢ ಸಂಕಲ್ಪದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಉಪನ್ಯಾಸಕರ ಕೊರತೆಯ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿ ನಿಗದಿತ ಅವಧಿಯಲ್ಲಿ ಪಠ್ಯ ಕ್ರಮಗಳನ್ನು ಮುಗಿಸಿ ವಿದ್ಯಾರ್ಥಿಗಳ ಓದಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಆಂದೋಲನ: ಜಿಲ್ಲೆಯಲ್ಲಿ ಫಲಿತಾಂಶ ವೃದ್ಧಿಗೆ ಆಯೋಜಿಸಿರುವ ವಿಶೇಷ ಕಾರ್ಯಕ್ರಮಗಳೇನು?
ಉಪನಿರ್ದೇಶಕರು: ಈ ಬಾರಿ ೩೦,೪೪೨ ವಿದ್ಯಾರ್ಥಿಗಳು ೫೧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಸಾಂಕ್ರಾಮಿಕ ಪಿಡುಗು ಸೃಷ್ಟಿಸಿದ ದುಷ್ಪರಿಣಾಮವು ಶೈಕ್ಷಣಿಕ ವಲಯದ ಮೇಲು ಬೀರಿದೆ. ಹೀಗಾಗಿ ಕೆಲ ವರ್ಷಗಳಿಂದ ಫಲಿತಾಂಶದಲ್ಲಿ ಏರಿಳಿಕೆ ಕಾಣುತ್ತಿದೆ. ಆದರೆ, ಈ ಬಾರಿ ಉತ್ತಮ ಫಲಿತಾಂಶ ತರಲು ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಪ್ರಾಂಶುಪಾಲರು-ಉಪನ್ಯಾಸಕರನ್ನು ಕರೆದು ಸಭೆಗಳನ್ನು ನಿರಂತರ ಸಭೆಗಳ ಮತ್ತು ಚರ್ಚೆಗಳ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಪ್ರತಿ ಕಾಲೇಜಿನಲ್ಲಿ ನಿಗದಿತ ಅವಧಿಯಲ್ಲಿ ಪಠ್ಯ ಕ್ರಮಗಳನ್ನು ಪೂರ್ಣಗೊಳಿಸಿ ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಿ ದ್ದು, ಇವರಿಗೆ ವಿಶೇಷ ತರಗತಿಗಳನ್ನು ಮಾಡಲಾಗುತ್ತಿದೆ. ಪೂರ್ವ ಸಿದ್ಧತೆ ಪರೀಕ್ಷೆಗಳು, ಕಿರು ಪರೀಕ್ಷೆಗಳ ಆಯಾ ವಿಷಯಗಳಲ್ಲಿ ನಡೆಯುತ್ತಿದ್ದು, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಆಂದೋಲನ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಏನು ಕ್ರಮ?
ಉಪ ನಿರ್ದೇಶಕರು: ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳು ಗರಿಷ್ಟ ಫಲಿತಾಂಶ ಪಡೆುುಂತ್ತಿವೆ. ಆದರೆ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಹಿನ್ನಡೆ ಸಾಧಿಸುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಲ್ಲಿ ಹಿನ್ನಡೆ ಸಾಧಿಸುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಜೊತೆಗೆ, ಉಪನ್ಯಾಸಕರ ಕೊರತೆಯನ್ನು ನೀಗಿಸಿ ಅತಿಥಿ ಉಪನ್ಯಾಸಕರ ಮೂಲಕ ಪಾಠ-ಪ್ರವಚನಗಳು ನಡೆಯುತ್ತಿವೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಕಾಳಜಿವಹಿಸಿ ಮನೆಯಲ್ಲಿ ಓದಿಸುವ ಕೆಲಸ ಮಾಡಿದರೆ ಫಲಿತಾಂಶ ಹೆಚ್ಚಳ ಕಾಣಬಹುದಾಗಿದೆ.

ಆಂದೋಲನ: ಜಿಲ್ಲೆಯಲ್ಲಿ ಇಲಾಖೆ ನಡೆಸುತ್ತಿರುವ ವಿಶೇಷ ಕಾರ್ಯಕ್ರಮ ಯಾವುದು?
ಉಪನಿರ್ದೇಶಕರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ವಿದ್ಯಾರ್ಥಿ ಜೀವನ ಮಹತ್ವದ ತಿರುವು ನೀಡಲಿದೆ. ಉದ್ಯೋಗ ಮತ್ತು ಹೆಚ್ಚಿನ ಓದಿಗೆ ಈ ಪರೀಕ್ಷೆ ಮಹತ್ವ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸಲು ಸಿದ್ಧಗೊಳಿಸಲು ವಾರದಲ್ಲಿ ಮೂರು ದಿನಗಳವರೆಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಹೆಚ್ಚು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಂದೋಲನ: ಸರ್ಕಾರದ ನಿಯಮ ಉಲ್ಲಂಘಿಸಿ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಟ್ಯೂಷನ್ ಸೆಂಟರ್‌ಗಳ ಮೇಲೆ ಕ್ರಮ ವಹಿಸಲಾಗುತ್ತಿದೆಯೇ?
ಉಪ ನಿರ್ದೇಶಕರು: ಪದವಿ ಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಟ್ಯೂಷನ್ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಸೆಂಟರ್‌ಗಳ ಬಗ್ಗೆ ಈವರೆಗೂ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದಲ್ಲಿ ಅಂತಹ ಸೆಂಟರ್‌ಗಳ ಮೇಲೆ ಕ್ರಮ ಜರುಗಿಸಲಾಗುವುದು.

ಆಂದೋಲನ: ಬಹು ಆಯ್ಕೆ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ನೆರವಾಗಲಿದೆಯೇ?
ಉಪ ನಿರ್ದೇಶಕರು: ವಿದ್ಯಾರ್ಥಿಗಳು ಹೆಚ್ಚಿನ ಅಂಕ ಮತ್ತು ಸಮಯ ಉಳಿಸುವ ದೃಷ್ಟಿಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ೨೦ ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ನೀಡುವುದಾಗಿ ಹೇಳಿದೆ. ಆದರೆ, ಈ ಪದ್ಧತಿಯು ಪ್ರಸ್ತುತ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಅಳವಡಿಕೆ ಆಗುವುದು ಕಷ್ಟವಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿಸದೇ ಪರೀಕ್ಷೆಗಾಗಿ ಹೆಚ್ಚಿನ ಸಮಯ ವಿದ್ಯಾಭ್ಯಾಸ ಮಾಡಬೇಕಾಗಿದೆ. ಕಷ್ಟವಾದ ವಿಷಯಗಳನ್ನು ಉಪನ್ಯಾಸಕರ ಜೊತೆ ಚರ್ಚೆಸಿ ಪರಿಹರಿಸಿಕೊಂಡು ಓದಿದರೆ ಉತ್ತಮ ಅಂಕಗಳ ಗಳಿಸಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ