Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಹಸಿರು ನಿಯಮ ಕಡ್ಡಾಯದ ನಡುವೆ ಕರಗಿದ ಪಟಾಕಿ ಸಂಭ್ರಮ

ದೀಪಾವಳಿ ಸಂಭ್ರಮ ಮತ್ತೆ ಬಂದಿದೆ. ಜನರು ಹಬ್ಬದ ಆಚರಣೆಗೆ ಸಜ್ಜಾಗಿದ್ದಾರೆ. ಆದರೆ ಹಬ್ಬದ ಪ್ರಮುಖ ಭಾಗವಾಗಿದ್ದ ಪಟಾಕಿ ಅಬ್ಬರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದಿದೆ. ಸುಪ್ರೀಕೋರ್ಟ್‌ ನಿರ್ದೇಶನ, ಸರಕಾರದ ನಿಯಂತ್ರಣ ಕ್ರಮಗಳು ಮತ್ತು ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯ ನಡುವೆ ಪಟಾಕಿ ವ್ಯಾಪಾರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ.

ಈ ವರ್ಷದಿಂದ ರಾಜ್ಯದಲ್ಲಿ ಹಸಿರು ಪಟಾಕಿಯನ್ನಷ್ಟೇ ಮಾರಲು ಅವಕಾಶ ನೀಡಲಾಗಿದೆ. ಜತೆಗೆ ಎಲ್ಲ ಪಟಾಕಿ ಲೇಬಲ್‌ ಗಳ ಮೇಲೆ ಕ್ಯೂ. ಆರ್‌. ಕೋಡ್‌ ಕಡ್ಡಾಯಗೊಳಿಸಲಾಗಿದೆ. ಈ ಎಲ್ಲ ನಿರ್ಬಂಧಗಳ ನಡುವೆಯೂ ಮೈಸೂರಿನ ಜೆ.ಕೆ. ಮೈದಾನದಲ್ಲಿ ಎಂದಿನಂತೆ ಮೈಸೂರಿನ ಪಟಾಕಿ ವ್ಯಾಪಾರಸ್ಥರ ಸಂಘದ ವತಿಯಿಂದ ಮಳಿಗೆಗಳನ್ನು ಹಾಕಲಾಗಿದೆ. ಆದರೆ ದೀಪಾವಳಿಗೆ ಮುನ್ನವೇ ನೂರಾರು ಸಂಖ್ಯೆಯಲ್ಲಿ ಧಾಂಗುಡಿ ಇಡುತ್ತಿದ್ದ ಗ್ರಾಹಕರ ಅಬ್ಬರ ಈ ಬಾರಿ ಕಾಣಿಸುತ್ತಿಲ್ಲ. ವ್ಯಾಪಾರಸ್ಥರ ಮೊಗದಲ್ಲೂ ಈ ಬಗ್ಗೆ ಚಿಂತೆಯ ಗೆರೆಗಳು ಮೂಡಿವೆ.

 

ಈ ಬಾರಿ ಸರಕಾರದ ನಿರ್ದೇಶನದಂತೆ ಹಸಿರು ಪಟಾಕಿಗಳನ್ನಷ್ಟೇ ಮಾರುತ್ತಿದ್ದೇವೆ. ಇದರಿಂದ ಪರಿಸರ ಮಾಲಿನ್ಯದ ಭಯವಿಲ್ಲ. ಈ ಬಾರಿ ಕ್ಯೂಆರ್‌ ಕೋಡ್‌ ಕಡ್ಡಾಯಗೊಳಿಸಿರುವುದರಿಂದ ಗ್ರಾಹಕರು ಕೋಡ್‌ ಸ್ಕ್ಯಾನ್‌ ಮಾಡಿ ಅದು ಎಲ್ಲಿ ಉತ್ಪಾದನೆಯಾಗಿದೆ ಎನ್ನುವುದನ್ನೂ ತಿಳಿದುಕೊಳ್ಳಬಹುದು. ನಕಲಿ ಪಟಾಕಿಗಳ ಪತ್ತೆಗೆ ಇದು ಸಹಕಾರಿಯಾಗಿದೆ. ಗ್ರಾಹಕರು ಧೈರ್ಯವಾಗಿ ಪಟಾಕಿ ಖರೀದಿಸಬಹುದು ಎಂದು ಆಂದೋಲನ ಡಿಜಿಟಲ್‌ ಜತೆ ಮಾತನಾಡಿದ ಪಟಾಕಿ ವರ್ತಕರ ಸಂಘದ ಉಪಾಧ್ಯಕ್ಷ ಶರತ್‌ ಸತೀಶ್‌‌ ಅವರು ತಿಳಿಸಿದ್ದಾರೆ.

ಮಳೆ ಇನ್ನೂ ಮುಂದುವರಿದಿದೆ. ಈ ಕಾರಣದಿಂದ ಜನರು ಪಟಾಕಿ ಖರೀದಿಗೆ ಆಸಕ್ತಿ ತೋರಿಸಿಲ್ಲ. ಮಳೆ ಬಿಡುವು ನೀಡಿದರೆ ಇಂದು ಸಂಜೆಯಿಂದಲೇ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್‌ ಆಂದೋಲನಕ್ಕೆ ತಿಳಿಸಿದರು.

ವರ್ಷಕ್ಕೊಮ್ಮೆ ಜೆ.ಕೆ.ಮೈದಾನದಲ್ಲಿ ಪಟಾಕಿ ಮಳಿಗೆ ಹಾಕಿ ಅದರಿಂದ ಬಂದ ಆದಾಯದಿಂದಲೇ ಕುಟುಂಬ ನಿರ್ವಹಣೆ ಮಾಡುವ ಹಲವು ಕುಟುಂಬಗಳಿವೆ. ಇವರೆಲ್ಲರೂ ವ್ಯಾಪಾರ ಗರಿದೆದರುವ ನಿರೀಕ್ಷೆಯಲ್ಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ