ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಶ್ರೀಚಾಮುಂಡೇಶ್ವರಿ ಅಮ್ಮ ನವರ ದೊಡ್ಡ ಹಬ್ಬ ಹಾಗೂ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಒಂದು ತಿಂಗಳ ಕಾಲ ನಡೆಯುವ ಈ ಉತ್ಸವದ ಪ್ರಮುಖ ಭಾಗವಾದ ರಕ್ತ ಬೀಜಾಸುರ ಸಂಹಾರ ಪ್ರಕ್ರಿಯೆ ನಡೆ ಯಿತು.ಮುಂಜಾನೆಯಿಂದಲೇ ಗ್ರಾಮದ ಹೃದಯ ಭಾಗದಲ್ಲಿರುವ ಚಾಮುಂ ಡೇಶ್ವರಿ ಅಮ್ಮನವರ ಕೇಲು ಮನೆಯಲ್ಲಿ ವಿಶೇಷ ಪೂಜೆ ನಡೆಯಿತು.ಅಲ್ಲಿಂದ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ಯನ್ನು ಹುಲಿವಾಹನದಲ್ಲಿ ಕೂರಿಸಿ ಗ್ರಾಮದ ಸುವರ್ಣವತಿ ನದಿಯಲ್ಲಿ ಹೊಸ ನೀರು ತರಲಾಯಿತು. ಬಳಿಕ ಸತ್ತಿಗೆ-ಸೂರಿಪಾನಿ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬಾಳೆಗೊನೆ ಕತ್ತರಿಸುವ ವಿಧಿ: ಮಹಿಷಾ ಸುರನ ಸಹೋದರ ರಕ್ತ ಬೀಜಾಸುರ ನನ್ನು ಚಾಮುಂಡೇಶ್ವರಿ ಸಪ್ತಮಾತೃಕೆಯರ ನೆರವಿನೊಂದಿಗೆ ಅಂಬಳೆ ಗ್ರಾಮದಲ್ಲಿ ಬಂದು ಕೊಂದಳು ಎಂಬ ನಂಬಿಕೆ ಇದೆ. ಇದರ ದ್ಯೋತಕವಾಗಿ ಇಲ್ಲಿ ಹಬ್ಬ ಆಚರಿಸುವ ವಾಡಿಕೆ ಇದೆ. ಅನಾದಿ ಕಾಲದಿಂದಲೂ ಈ ಪದ್ಧತಿ ರೂಢಿಯ ಲ್ಲಿದೆ. ಅದರಂತೆ ಚಾಮುಂಡೇ ಶ್ವರಿ ಮತ್ತು ರಕ್ತಬೀಜಾ ಸುರರ ವೇಷಧಾರಿಗಳು ರಂಗಸ್ಥಳದಲ್ಲಿ ಮೂರು ಬಾರಿ ಸುತ್ತಿದ ಬಳಿಕ ಕತ್ತಿ ಯಿಂದ ಬಾಳೆಗೊನೆ ಯನ್ನು ಒಂದೇ ಏಟಿಗೆ ಕತ್ತರಿಸುವ ಸಂಪ್ರದಾಯ ನೆರವೇರಿತು.
ವಿವಿಧ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ, ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತವರು ಶೂಲದಯ್ಯ ದೇವರಿಗೆ ತಲೆ ಮೇಲೆ ಎಳನೀರು ಹೊತ್ತು ಹರಕೆ ತೀರಿಸಿದರು. ಈ ದೊಡ್ಡ ಹಬ್ಬ ಜಾತ್ರೆಗೆ ವಿವಿಧ ಗ್ರಾಮಗಳ ಭಕ್ತರು ಬಂದು ದರ್ಶನ ಪಡೆದರು.





