ತಲಕಾಡಿನಲ್ಲಿ ಬೋರ್‌ವೆಲ್ ಮೂಲಕ ಉಪ್ಪುನೀರನ್ನೇ ಕುಡಿಯಬೇಕಾದ ಸ್ಥಿತಿ
ವರದಿ: ಟಿ.ಎ. ಸಾದಿಕ್ ಪಾಷ
ತಲಕಾಡು: ಸಮುದ್ರದ ದಡದಲ್ಲಿದ್ದರೂ ಉಪ್ಪಿಗೆ ಬರ ಎಂಬಂತೆ ತಲಕಾಡಿನ ಸುತ್ತೆಲ್ಲ ಸಿಹಿ ನೀರಿನ ಕಾವೇರಿ ಹರಿಯುತ್ತಿದ್ದರೂ ನದಿ ನೀರು ತಲಕಾಡಿನ ಸಾರ್ವಜನಿಕರಿಗೆ ಪೂರ್ಣವಾಗಿ ಲಭ್ಯವಾಗಿಲ್ಲ. ಬೋರ್‌ವೆಲ್‌ಗಳ ನೆರವಿನಿಂದ ಉಪ್ಪು ನೀರನ್ನೇ ನಿರಂತರವಾಗಿ ಬಳಸುತ್ತಿದ್ದಾರೆ.
ಆಶ್ರಯ ಬಡಾವಣೆಗಂತೂ ಉಪ್ಪು ನೀರೇ ಗತಿಯಾದಂತಹ ಪರಿಸರವಿದೆ. ಅನೇಕ ಶಾಸಕರುಗಳು ಬನ್ನೂರು ಮತ್ತು ತಿ. ನರಸೀಪುರ ಕ್ಷೇತ್ರಗಳಿಂದ ಆಯ್ಕೆಯಾದರೂ ಈ ನೀರಿನ ಸಮಸ್ಯೆ ಬಗ್ಗೆ ತಾಂತ್ರಿಕವಾಗಿಯಾವ ಜನಪ್ರತಿನಿಧಿಯೂ ಆಲೋಚನೆ ಮಾಡದ ಹಿನ್ನೆಲೆಯಲ್ಲಿ ಆಶ್ರಯ ಬಡಾವಣೆಯ ನಿವಾಸಿಗಳಿಗೆ ಇನ್ನೂ ಸಿಹಿ ನೀರಿನ ಮೋಕ್ಷಸಿಕ್ಕಿಲ್ಲ.
ಸ್ವಜಲಧಾರೆ ಎಂಬ ಯೋಜನೆಯೂ ದಶಕಗಳ ಹಿಂದೆ ಚಾಲನೆ ನೀಡಿದರೂ ಅದರ ಉದ್ದೇಶ ಮಾತ್ರ ಈಡೇರಲಿಲ್ಲ. ಪೂರ್ಣವಾಗಿ ತಲಕಾಡು ನಿವಾಸಿಗಳಿಗೆ ಕಾವೇರಿ ನೀರು ಲಭ್ಯವಾಗಿಲ್ಲ. ಸ್ವಜಲಧಾರೆ ಹೆಸರಲ್ಲಿ ಈಗಲೂ ಕಾರ‌್ಯ ನಿರ್ವಹಣೆಯಡಿ ವರ್ಷಕ್ಕೆ ೧೫ ಲಕ್ಷ ರೂ.ಗಳನ್ನು ನಿರ್ವಹಣೆಗಾಗಿ ಖಾಸಗಿ ಗುತ್ತಿಗೆದಾರನಿಗೆ ನೀಡಲಾಗುತ್ತಿದೆ. ೫ ನೀರಿನ ಟ್ಯಾಂಕ್‌ಗಳನ್ನು ಭರ್ತಿ ಮಾಡಿ ಪ್ರತಿದಿನವೂ ಬೆಳಿಗ್ಗೆ, ಸಂಜೆ ಕಾವೇರಿ ನೀರು ಸರಬರಾಜು ಮಾಡಬೇಕಾಗಿರುವ ಗುತ್ತಿಗೆದಾರ ನೀಡುತ್ತಿರುವುದೇ ಉಪ್ಪುನೀರಾಗಿದೆ.
ಎರಡು ನೀರಿನ ಟ್ಯಾಂಕರ್‌ಗಳನ್ನು ಭರ್ತಿವಾಡಿ ಇಡೀ ತಲಕಾಡಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಸ್ವಜಲಧಾರೆ ಯೋಜನೆಯ ಅಸಲಿ ಉದ್ದೇಶ ಹಳ್ಳ ಹಿಡಿದಂತಾಗಿದೆ. ಇದಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಗಳು ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸ್ವಜಲಧಾರೆ ಯೋಜನೆಯೇ ದಿಕ್ಕುತಪ್ಪಿ ನಿಂತಿರುವಾಗ ಈಗ ಜಲ ಜೀವನ್ ಮಿಷನ್‌ನ ಕಾಮಗಾರಿ ಆರಂಭವಾಗಿದೆ. ಖಾಸಗಿ ಸಂಸ್ಥೆಗೆ ಸುವಾರು ೬ ಕೋಟಿ ರೂ.ಗಳ ಈ ಯೋಜನೆಗೆ ಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಮೊದಲು ನೀರಿನ ಟ್ಯಾಂಕ್ ನಿರ್ಮಾಣ ಮಾಡದೆ ನಲ್ಲಿ ಅಳವಡಿಕೆಗಾಗಿ ಪ್ರಮುಖರಸ್ತೆ , ಬೀದಿಗಳ ಉಪರಸ್ತೆ ಅಗೆದು ಜನರ ಸಂಚಾರಕ್ಕೆ ತೊಂದರೆ ನೀಡಿದೆ.
ಈಗ ೩ ಮತ್ತು ೯ನೇ ವಾರ್ಡ್‌ಗಳಿಗೆ ಮಾತ್ರ ಕಾವೇರಿ ನೀರು ಲಭ್ಯವಾಗುತ್ತಿದೆ. ಉಳಿದ ೭ ವಾರ್ಡ್‌ಗಳಿಗೂ ಕಾವೇರಿ ನೀರು ಇನ್ನೂ ಪೂರೈಕೆಯಾಗಿಲ್ಲ. ಆಶ್ರಯ ಬಡಾವಣೆಗಂತೂ ರಸ್ತೆಯಿಲ್ಲದ ಕಾರಣ ನೀರಿನ ಭಾಗ್ಯ ಸಿಗುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಕಾವೇರಿ ನೀರು ಪೂರೈಕೆಯ ಲೋಪ ಸರಿಪಡಿಸಲು ಮುಂದಾಗಬೇಕಿದೆ.
ಜಿಜಿಎಂ ಯೋಜನೆಯಲ್ಲಿ ಎಲ್ಲ ವಾರ್ಡ್‌ಗಳಿಗೂ ಕಾವೇರಿ ನದಿ ನೀರು ತಲುಪಿಸುವ ಭರವಸೆ ನೀಡಿದ್ದು, ಆಶ್ರಯ ಬಡಾವಣೆಗೂ ಕಾವೇರಿ ನೀರು ತಲುಪಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದ್ದೇನೆ.-ಅಶ್ವಿನ್ ಕುಮಾರ್, ಶಾಸಕ
ಕಾವೇರಿ ನದಿ ನೀರು ತಲಕಾಡಿನ ಎಲ್ಲ ವಾರ್ಡ್‌ಗಳಿಗೂ ತಲುಪುತ್ತಿಲ್ಲ ಎಂಬುದು ಸತ್ಯ. ಹತ್ತಾರೂ ವರ್ಷಗಳಿಂದ ಕಾವೇರಿ ನದಿ ನೀರು ನಿರ್ವಹಣೆಗಾಗಿ ಗುತ್ತಿಗೆದಾರನಿಗೆ ಹಣ ವಿತರಿಸಲಾಗುತ್ತಿದೆ. ಆದರೆ, ಹತ್ತಾರೂ ವರ್ಷಗಳಿಂದಲೂ ಕಾವೇರಿ ನೀರು ತಲಕಾಡಿನ ಜನರಿಗೆ ಪೂರೈಕೆಯೇ ಆಗಿಲ್ಲ. ಐದು ನೀರಿನ ಟ್ಯಾಂಕ್ ಭರ್ತಿಯೂ ಆಗಿಲ್ಲ. ಈ ಬಗ್ಗೆ ಜಿಪಂ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. -ಪ್ರಮೋದ್, ಗ್ರಾ.ಪಂ. ಸದಸ್ಯ