ತಾಂತ್ರಿಕ ದೋಷ ಉಂಟಾಗಿರುವ ಕಾರಣ ಜನವರಿ 22ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಯುವರಾಜ ಕಾಲೇಜು ತಿಳಿಸಿದೆ.
ಈ ಹಿಂದೆಯೇ ಜನವರಿ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಪದವಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಲಾಗಿತ್ತು. ಆದರೆ ಸೋಮವಾರ ಪರೀಕ್ಷೆ ಇದ್ದು ಇನ್ನೂ ಸಹ ಪ್ರವೇಶಪತ್ರ ಕೈ ಸೇರದ ಕಾರಣ ಆತಂಕಗೊಂಡ ವಿದ್ಯಾರ್ಥಿಗಳು ಇಂದು ( ಜನವರಿ 20 ) ಕಾಲೇಜಿನ ಮುಂದೆ ಜಮಾಯಿಸಿದ್ದರು.
ಬಳಿಕ ಕಾಲೇಜು ಆಡಳಿತ ಮಂಡಳಿ ಸೂಚನಾ ಫಲಕದಲ್ಲಿ ಸೋಮವಾರ ಇದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ. ಏಕೀಕೃತ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ತಂತ್ರಜ್ಞಾನದಲ್ಲಿ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಲು ತಾಂತ್ರಿಕ ದೋಷ ಇರುವ ಕಾರಣ ಜನವರಿ 22ರಂದು ನಡೆಯಬೇಕಿದ್ದ ಎಲ್ಲಾ ಪದವಿ ಪರೀಕ್ಷೆಗಳನ್ನು ಫೆಬ್ರವರಿ 12ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೇ ಪರೀಕ್ಷೆ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಹಿಂದಿನಂತೆಯೇ ಬೆಳಗ್ಗೆ ಹಾಗೂ ಮಧ್ಯಾಹ್ನ ಮುಂದುವರೆಯುತ್ತದೆ ಎಂದೂ ಸಹ ತಿಳಿಸಲಾಗಿದೆ.