Mysore
21
overcast clouds

Social Media

ಗುರುವಾರ, 01 ಜನವರಿ 2026
Light
Dark

ಎಐಡಿಎಸ್‌ಒ ಸಹಯೋಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಚಾಮರಾಜನಗರ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-೨೦) ಬ್ಯಾಚ್ ಪದವಿ ವಿದ್ಯಾರ್ಥಿಗಳ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್‌ನ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ರಾಜ್ಯದಲ್ಲಿ ಎನ್‌ಇಪಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತಲುಪಿದ್ದಾರೆ. ಮೊದಲ ವರ್ಷದ ಎರಡನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆಯಾಗಿಲ್ಲ. ಕೂಡಲೇ ಮೈಸೂರು ವಿಶ್ವವಿದ್ಯಾಲಯವು ಫಲಿತಾಂಶವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿವೇತನ ಬಿಡುಗಡೆಯಾಗದೆ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಬಡ ಕುಟುಂಬಗಳ ನೂರಾರು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಪೂರೈಕೆಗಾಗಿ ವಿದ್ಯಾರ್ಥಿವೇತನದ ಮೇಲೆ ಅವಲಂಬಿತರಾಗಿರುತ್ತಾರೆ. ವಿದ್ಯಾರ್ಥಿವೇತನ ಸಿಗದಿದ್ದರೆ ಅವರಲ್ಲಿ ಬಹುಪಾಲು ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರೈಸುವುದೇ ಕಷ್ಟಕರವಾಗುತ್ತದೆ. ಕೂಡಲೇ ಸರ್ಕಾರ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆಗಳನ್ನು ಹೆಚ್ಚಿಸುವ ಜೊತೆಗೆ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ನಗರದ ಹೊರವಲಯದಲ್ಲಿ ಸ್ಥಾಪನೆಯಾಗುತ್ತಿರುವ ನೂತನ ವಿಶ್ವವಿದ್ಯಾಲಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಸೆಲ್ಫ್ ಫೈನಾನ್ಸ್ ಕೋರ್ಸ್ಗಳನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.ಸ್ಥಳಕ್ಕಾಗಮಿಸಿದ ಉಪ ತಹಸೀಲ್ದಾರ್ ರಂಗರಾಜು ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕಿ ಆಸಿಯಾ ಬೇಗಂ, ರಚಿತಾ, ಬಿಂದುಶ್ರೀ, ರಕ್ಷಿತಾ, ಅನಿತಾ, ಸುಚಿತ್ರಾ, ಶಾಲಿನಿ, ಅಪೂರ್ವ, ಚಂದನ, ಭಾಗ್ಯಲಕ್ಷ್ಮಿ ಸೇರಿದಂತೆ ಇತರರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!