Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮತ್ತೆ ಸುವರ್ಣಾವತಿ ಹೊಳೆ ಪಾತ್ರದಲ್ಲಿ ನೆರೆ ಭೀತಿ

ಚಾಮರಾಜನಗರ: ಜಿಲ್ಲೆಯಲ್ಲಿ ಸತತ ಎರಡನೇ ದಿನಶುಕ್ರವಾರರಾತ್ರಿಯೂ ಧಾರಕಾರ ಮಳೆ ಮುಂದುವರಿದಿದ್ದು ಚಿಕ್ಕಹೊಳೆ -ಸುವರ್ಣಾವತಿ ಜಲಾಶಯಗಳ ನದಿ ಪಾತ್ರದಲ್ಲಿ ನೆರೆ ಭೀತಿ ಉಂಟಾಗಿದೆಯಲ್ಲದೇ ವಾಸದಮನೆ ಹಾಗೂ ವಿದ್ಯುತ್ ಕಂಬಗಳು ನೆಲಕ್ಕೆ ಒರಗಿವೆ.
ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಂದ ೧೪೦೦ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಅಲ್ಲದೇ, ಬಿ.ರಂ.ಬೆಟ್ಟ ಕೆರೆ, ಮರಗದಕೆರೆ, ಮಾಲೆಗೆರೆಕೆರೆ ಕೋಡಿ ಬಿದ್ದು ಹರಿಯುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಎರಡೂ ಜಲಾಶಯಗಳ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ನೆರೆ ಭೀತಿ ಎದುರಾಗಿದೆ.
ನದಿ ಪಾತ್ರದ ಸುತ್ತಮುತ್ತ ವಾಸಿಸುವ ಜನರು ಮತ್ತು ಕೃಷಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಯಳಂದೂರು ತಹಶೀಲ್ದಾರ್ ಕೆ ಬಿ.ಆನಂದಪ್ಪ ನಾಯಕ ಮನವಿ ಮಾಡಿದ್ದಾರೆ.
ಯಳಂದೂರಿನ ಕೆಸ್ತೂರು ಕೆರೆ ಮತ್ತೆ ಕೋಡಿಬಿದ್ದು ಮನೆಗಳತ್ತ ನೀರು ನುಗ್ಗಿದ್ದು ಯಳಂದೂರು ತಾ.ಮದ್ದೂರು, ಗಣಗನೂರು, ಅಗರ, ಮಾಂಬಳ್ಳಿ ಗ್ರಾಮಗಳತ್ತ ನೆರೆ ಆವರಿಸಿದೆ.
ಯಳಂದೂರು ತಾಲ್ಲೂಕಿನಲ್ಲಿ ೪೨, ಹನೂರು ತಾ.೬ ಮತ್ತು ಚಾ.ನಗರ ತಾ.ನಲ್ಲಿ ೧ ಮನೆ ಭಾಗಶಃ ಹಾನಿ ಗೊಳಗಾಗಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಶನಿವಾರ ವರದಿ ಸಲ್ಲಿಕೆಯಾಗಿದೆ.ಶುಕ್ರವಾರ ಯಳಂದೂರಿನಲ್ಲಿ ೧೩ ಮತ್ತು ಚಾ.ನಗರ ತಾಲ್ಲೂಕಿನಲ್ಲಿ
೨ಮನೆ ಭಾಗಶಃ ಕುಸಿದಿರುವ ವರದಿಯಾಗಿದೆ.
ಅಕ್ಟೋಬರ್ ನಲ್ಲಿ ಈ ತನಕ ಮಳೆಯಿಂದ ಜಿಲ್ಲೆಯಲ್ಲಿ ೯೩ಮನೆ ಮತ್ತು ೭ವಿದ್ಯುತ್ ಪೋಲುಗಳಿಗೆ ಹಾನಿ ಸಂಭವಿಸಿರುವುದಾಗಿ ಆಯಾ ತಾಲ್ಲೂಕು ಕಚೇರಿಗಳಿಂದ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸ್ವಲ್ಪ ತಗ್ಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಶನಿವಾರ ಸಂಜೆ ೫ಘಂಟೆ ವರೆಗೂ ಮಳೆ ಧರೆಗೆ ಇಳಿದಿರಲಿಲ್ಲವಾದರೂ ಮೋಡ ಕವಿದ ದಟ್ಟ ವಾತಾವರಣ ಆವರಿಸಿತ್ತು.
ಚಿಕ್ಕಮೋಳೆ, ದೊಡ್ಡ ಮೋಳೆ, ಬ್ಯಾಡಮೂಡ್ಲು ಭಾಗದ ನೂರಾರು ಎಕರೆ ಜಲಾವೃತವಾಗಿ ಬೆಳೆಹಾನಿ ಯಾಗಿರುವುದಾಗಿ ತಿಳಿದು ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ