Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹೊಸ ವರ್ಷಕ್ಕೆ 1 ಸಾವಿರ ಬೈಸಿಕಲ್ ಸೇರ್ಪಡೆ!

ಅತ್ಯಾಧುನಿಕ ಸೌಲಭ್ಯಗಳಿರುವ ಸೈಕಲ್ ಸಮರ್ಪಿಸಲು ಸಿದ್ಧತೆ; ಗಣರಾಜೋತ್ಸವದ ದಿನದಂದು  ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ

ದಿನೇಶ್‌ ಕುಮಾರ್‌ 

ಟ್ರಿಣ್ ಟ್ರಿಣ್‌ಗೆ 18 ಸಾವಿರ ಚಂದಾದಾರರು
*ನಗರದ 45 ಕಡೆಗಳಲ್ಲಿ ಬೈಸಿಕಲ್ ಕೇಂದ್ರ, 450 ಸೈಕಲ್‌ಗಳು
* ಸದ್ಯ 300 ರಿಂದ 350 ಮಂದಿಯಿಂದಷ್ಟೇ ಸೈಕಲ್ ಬಳಕೆ
* ಜನವರಿಯಲ್ಲಿ ಇನ್ನೂ ೧ ಸಾವಿರ ಸೈಕಲ್ ಸೇರ್ಪಡೆ

ಮೈಸೂರು: ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಪ್ರಾರಂಭಿಸಿದ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆ ‘ಟ್ರಿಣ್ ಟ್ರಿಣ್’ ಸೈಕಲ್‌ಗಳು ರಸ್ತೆಗಿಳಿಯದೆ ಹಲವು ದಿನಗಳೇ ಆಗಿವೆ.
ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೇವೆ ಪ್ರಾರಂಭವಾಗಿ ಐದು ವರ್ಷಗಳು ಪೂರೈಸಿದೆ. ಪರಿಸರ ಸ್ನೇಹಿ ಸೈಕಲ್‌ಗಳ ಬಳಕೆ ಹೆಚ್ಚಿಸಬೇಕು ಎಂಬ ದೃಷ್ಟಿಯಿಂದ ಪ್ರಾರಂಭ ಮಾಡಲಾಗಿತ್ತು. ಈ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಕಳೆದ ಮೂರು ವರ್ಷಗಳ ಹಿಂದೆ ೧೪ ಸಾವಿರ ಮಂದಿ ಚಂದಾದಾರರಾಗಿದ್ದರು. ಇದೀಗ ಮತ್ತೆ ೪ ಸಾವಿರ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಯೋಜನೆ ಜನಪ್ರಿಯಗೊಂಡು ಬಳಕೆದಾರರೂ ಹೆಚ್ಚಾದರು. ಮೊದಲಿಗೆ ಎಷ್ಟೋ ಜನ ಸ್ಕೂಟರ್‌ಗಳನ್ನು ಬಿಟ್ಟು ಸೈಕಲ್ ಬಳಕೆಯತ್ತ ಮುಖ ಮಾಡಿದ್ದರು. ಆರೋಗ್ಯದ ದೃಷ್ಟಿ ಹಾಗೂ ಪರಿಸರ ಉಳಿಸುವ ದೃಷ್ಟಿಯಿಂದ ಈ ಸೈಕಲ್ ಬಳಕೆ ಅತ್ಯುತ್ತಮ ಎನ್ನುವುದು ಜನರ ಅಭಿಪ್ರಾಯವೂ ಆಗಿತ್ತು. ಆದರೆ, ಟ್ರಿಣ್ ಟ್ರಿಣ್ ಸೈಕಲ್‌ಗಳ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ಬಳಕೆ ಕಡಿಮೆಯಾಗಿದ್ದು, ಸದ್ಯ ೩೦೦- ೩೫೦ ಮಂದಿ ಮಾತ್ರ ಇದನ್ನು ಬಳಸುತ್ತಿದ್ದಾರೆ.
ಚಾಮುಂಡಿಬೆಟ್ಟ ಸೇರಿದಂತೆ ಮೈಸೂರಿನ ೪೫ ಕಡೆಗಳಲ್ಲಿ ಟ್ರಿಣ್ ಟ್ರಿಣ್ ಬೈಸಿಕಲ್ ಕೇಂದ್ರಗಳಿದ್ದು, ೪೫೦ ಸೈಕಲ್‌ಗಳಿವೆ. ನಗರಪಾಲಿಕೆಯಿಂದ ಉತ್ತಮ ನಿರ್ವಹಣೆಯೂ ಇದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಾದೇಶಿಕ ಸಾರಿಗೆ ಕಚೇರಿ, ಚಾಮರಾಜೇಂದ್ರ ಮೃಗಾಲಯ,, ಅರಮನೆ ಬಳಿ ನೋಂದಣಿ ಕೇಂದ್ರಗಳಿವೆ.
ಹೊಸ ಯೋಜನೆ: ಸೈಕಲ್ ಬಳಕೆದಾರರನ್ನು ಉತ್ತೇಜಿಸುವ ದೃಷ್ಟಿಯಿಂದ ನಗರಪಾಲಿಕೆ ವತಿಯಿಂದ ನಗರದ ಹೃದಯ ಭಾಗದಲ್ಲಿ ೮.೭ ಕಿ.ಮೀ. ಸೈಕಲ್ ಟ್ರ್ಯಾಕ್ ನಿರ್ವಾಣಕ್ಕೆ ಮುಂದಾಗಿದ್ದು, ೪ ಕೋಟಿ ರೂ. ವೆಚ್ಚದಲ್ಲಿ ಈ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ.
ಲಲಿತಮಹಲ್ ರಸ್ತೆ ಮತ್ತು ಕೆ.ಆರ್.ಎಸ್. ರಸ್ತೆಯ ಚೆಲುವಾಂಬ ಪಾರ್ಕ್ ಬಳಿ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದ್ದು, ಈಗ ಹೆಚ್ಚುವರಿಯಾಗಿ ೮.೭ ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಈಗಾಗಲೇ ಖಾಸಗಿ ಏಜೆನ್ಸಿಯೊಂದಕ್ಕೆ ಜವಾಬ್ದಾರಿವಹಿಸಿ ವರ್ಕ್ ಆರ್ಡರ್ ಅನ್ನೂ ನೀಡಲಾಗಿದೆ.
ಮೊದಲ ಹಂತದಲ್ಲಿ ಮಾನಸಗಂಗೋತ್ರಿ ಪ್ರವೇಶ ದ್ವಾರದ ಕುವೆಂಪು ಪ್ರತಿಮೆಯಿಂದ ಕುಕ್ಕರಹಳ್ಳಿ ರಸ್ತೆ, ಕೌಟಿಲ್ಯ ವೃತ್ತದಿಂದ ಮುಡಾ ಕಚೇರಿ, ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ಸರ್ಕಲ್, ಕುಕ್ಕರಹಳ್ಳಿಯಿಂದ ವಿಶ್ವ ಮಾನವ ಜೋಡಿರಸ್ತೆ ಮಾರ್ಗವಾಗಿ ರಿಂಗ್ ರಸ್ತೆಗೆ ಸೇರುವ ರಸ್ತೆ, ಅಶೋಕ ವೃತ್ತದಿಂದ ಟೆನ್ನಿಸ್ ಕೋರ್ಟ್, ಚಾಮರಾಜ ಜೋಡಿರಸ್ತೆ, ರಮಾ ವಿಲಾಸ ರಸ್ತೆ, ಕೌಟಿಲ್ಯ ವೃತ್ತದ ರಸ್ತೆ, ರಾಮಸ್ವಾಮಿ ವೃತ್ತದಿಂದ ದಾಸಪ್ಪ ವೃತ್ತ, ಮೈಸೂರು ವಿಶ್ವವಿದ್ಯಾನಿಲಯದ ರಸ್ತೆವರೆಗೆ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
೧ ಸಾವಿರ ಸೈಕಲ್: ಈಗಿರುವ ಸೈಕಲ್‌ಗಳ ಸ್ಥಿತಿ ಚೆನ್ನಾಗಿಲ್ಲದ ಕಾರಣ ಜನವರಿ ತಿಂಗಳಿನಲ್ಲಿ ಜಿಪಿಆರ್‌ಎಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿರುವ 1 ಸಾವಿರ ಸೈಕಲ್‌ಗಳನ್ನು ಟ್ರಿಣ್ ಟ್ರಿಣ್ ಸೇವೆಗೆ ಸಮರ್ಪಿಸಲು ನಗರಪಾಲಿಕೆ ಸಿದ್ಧತೆ ನಡೆಸುತ್ತಿದೆ. ಗಣರಾಜೋತ್ಸವದ ದಿನದಂದು ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.



ಜನರ ಆರೋಗ್ಯ ಹಾಗೂ ಉತ್ತಮ ಪರಿಸರದ ದೃಷ್ಟಿಯಿಂದ ಸೈಕಲ್ ಬಳಕೆಗೆ ಹೆಚ್ಚು ಒತ್ತು ನೀಡಲು ಉದ್ದೇಶಿಸಲಾಗಿದೆ. ಸೈಕಲ್ ಸವಾರರಿಗೆ ಅನುಕೂಲ ಕಲ್ಪಿಸಲು ೪ ಕೋಟಿ ರೂ. ವೆಚ್ಚದಲ್ಲಿ ೮.೭ ಕಿ.ಮೀ ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಟ್ರ್ಯಾಕ್ ನಿರ್ಮಾಣ ಮಾಡಿದ ಮೇಲೆ ವಾಹನಗಳ ಬದಲು ಹೆಚ್ಚು ಸೈಕಲ್ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
-ಶಿವಕುಮಾರ್, ಮಹಾಪೌರರು.

 



ಸೈಕಲ್‌ಗಳು ಹಳೆಯದಾದ ಕಾರಣ ಮೊದಲಿನಷ್ಟು ಬಳಕೆಯಾಗುತ್ತಿಲ್ಲ. ಆದರೂ ಸೈಕಲ್ ಬಳಕೆ ಬಗ್ಗೆ ಜನರು ಉತ್ಸಾಹಿಗಳಾಗಿದ್ದಾರೆ. ಹೀಗಾಗಿ ೧ ಸಾವಿರ ಹೊಸ ಸೈಕಲ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಜನವರಿ ತಿಂಗಳ ಒಳಗಾಗಿ ಸೈಕಲ್ ಟ್ರ್ತ್ಯ್ಯಾಕ್ ಹಾಗೂ ಹೊಸ ಸೈಕಲ್‌ಗಳು ರಸ್ತೆಗಿಳಿಯಲಿವೆ.
ಲಕ್ಷ್ಮೀಕಾಂತರೆಡ್ಡಿ, ನಗರಪಾಲಿಕೆ ಆಯುಕ್ತರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ