Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಆದರ್ಶ ಶಾಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ವಿದ್ಯಾರ್ಥಿ, ಪೋಷಕರಿಂದ ಹೆದ್ದಾರಿ ಸಂಚಾರ ತಡೆ

* ಪೋಷಕರ ಜೊತೆಗೂಡಿ ವಿದ್ಯಾರ್ಥಿಗಳಿಂದ ಹೆದ್ದಾರಿ ಸಂಚಾರ ತಡೆ
* ಹೆಚ್ಚುವರಿ ಬಸ್ ಓಡಿಸಲು ಒತ್ತಾಯ

ಚಾಮರಾಜನಗರ: ತಾಲೂಕಿನ ಮಲ್ಲಯ್ಯನಪುರ ಸಮೀಪದ ಆದರ್ಶ ಶಾಲೆಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ಡಾಂಬರ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆಗೂಡಿ ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು.
ನಗರದ ಹೊರ ವಲಯದ ಬೈಪಾಸ್ ರಸ್ತೆಯ ಸೇತುವೆ ಬಳಿಯ ಹೆದ್ದಾರಿಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಿಂದ ಆದರ್ಶ ಶಾಲೆಗೆ ನೂರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಶಾಲೆಯಲ್ಲಿ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಚಾಮರಾಜನಗರದಿಂದ ಶಾಲೆಗೆ ಬೆಳಗ್ಗೆ ೯ ಹಾಗೂ ೯.೧೫ಕ್ಕೆ ಎರಡು ಬಸ್‌ಗಳಿವೆ. ಉಳಿದಂತೆ ಶನಿವಾರ ಬೆಳಗ್ಗೆ ಒಂದು ಬಸ್ ಮಾತ್ರ ಬಿಡಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ ೯ ಗಂಟೆಗೆ ಪರೀಕ್ಷೆ ಇದ್ದರೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಲ್ಲದೇ ಸಂಜೆಯ ವೇಳೆಯೂ ೨ ಬಸ್ ಮಾತ್ರ ಇರುವುದರಿಂದ ಒಂದು ಬಸ್‌ನಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ ಎಂದು ದೂರಿದರು.
೨ ಬಸ್‌ಗಳು ಇರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು ನಗರದಿಂದ ಶಾಲೆಯವರೆಗೆ ೪ ಕಿ.ಮೀ ನಡೆಯಬೇಕಿದೆ ಈ ಸಂಬಂಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಬೆಳಗ್ಗೆ ಹಾಗೂ ಸಂಜೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು. ಜೊತೆಗೆ ಹೆದ್ದಾರಿಯಿಂದ ಶಾಲೆಯವರೆಗೆ ೩ ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ಡಾಂಬರ್ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು. ಮಳೆ ಬಂದರೆ ಈ ರಸ್ತೆ ಸಂಪೂರ್ಣ ಕೆಸರುಮಯವಾಗುವುದರಿಂದ ಮಕ್ಕಳು ಶೂ ಬಿಚ್ಚಿ ನಡೆದುಕೊಂಡು ಹೋಗಬೇಕಿದೆ ಎಂದು ದೂರಿದರು.
ಪ್ರತಿಭಟನೆ ನಡೆಸಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಕಿ.ಮೀ.ಗಟ್ಟಲೇ ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ವಾಹನ ಸವಾರರು ಪರದಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ