Mysore
20
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಪ್ರತಿಭಟನೆಯಲ್ಲಿ ಸಿಎಂ ಪುತ್ಥಳಿಗೆ ರಕ್ತಾಭಿಷೇಕ : ರೈತರ ಬಂಧನ

ಮಂಡ್ಯ : ರೈತರ ಅನಿರ್ದಿಷ್ಟಾವಧಿ ಧರಣಿಯನ್ನು ಸಂಪೂರ್ಣವಾಗಿ ಸರ್ಕಾರ ನಿರ್ಲಕ್ಷಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ಥಳಿಗೆ ರೈತ ಸಂಘದ ಕಾರ್ಯಕರ್ತರು ರಕ್ತಾಭಿಷೇಕ ಮಾಡಿದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ. ಮಧುಚಂದನ್ ಅವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಕೈ ಮತ್ತು ಬೆರಳನ್ನು ಕೊಯ್ದುಕೊಂಡು, ಬಳಿಕ ಸಿರೆಂಜ್‌ನಲ್ಲಿ ರಕ್ತವನ್ನು ತುಂಬಿಸಿಕೊಂಡು ಸಿಎಂ ಪುತ್ತಳಿಗೆ ಅಭಿಷೇಕ ಮಾಡಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಪುತ್ತಳಿ ಜತೆಗೆ 50ಕ್ಕೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ನಂತರ ಡಿಎಆರ್ ಕವಾಯತು ಮೈದಾನಕ್ಕೆ ಕರೆದುಕೊಂಡು ಹೋದರು.


ಕಬ್ಬು, ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ೫೨ನೇ ದಿನ ಪೂರೈಸಿದೆ. ಇಷ್ಟಾದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಕೇವಲ ಭರವಸೆ ನೀಡುತ್ತಲೇ ಕಾಲ ಮುಂದೂಡುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸದೆ, ಬೇಡಿಕೆಯನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರೈತರ ರಕ್ತವನ್ನು ಪರೋಕ್ಷವಾಗಿ ಕುಡಿಯುವುದು ಬೇಡ. ನಾವೇ ನಮ್ಮ ರಕ್ತವನ್ನು ನಿಮಗೆ ಅರ್ಪಿಸುತ್ತೇವೆಂದು ಪುತ್ತಳಿಗೆ ಅಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡ ನಮ್ಮ ಬೇಡಿಕೆಯನ್ನು ಈಡೇರಿಸಿದರೆ, ಅದೇ ಪುತ್ತಳಿಯನ್ನು ಹಾಲಿನಿಂದ ತೊಳೆದು ಅಭಿಷೇಕ ಮಾಡುತ್ತೇವೆ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಸನ್ನ ಎನ್.ಗೌಡ, ಲಿಂಗಪ್ಪಾಜಿ, ವಿಜಯಕುಮಾರ್, ಪಿ.ಡಿ.ರಮೇಶ್ ಇತರರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ