ತಿ.ನರಸೀಪುರ ತಾಲ್ಲೂಕಿನ ನೆರಗ್ಯಾತನಹಳ್ಳಿಯಲ್ಲಿ ಘಟನೆ
ತಿ.ನರಸೀಪುರ: ಹಲ್ಲಿನ ಜೋಳದ ಬಿಡಿಸುವ ಯಂತ್ರದ ಟ್ರಾಕ್ಟರ್ ಮಗುಚಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೆರಗ್ಯಾತನಹಳ್ಳಿ ಸಮೀಪದಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ಬೂದಹಳ್ಳಿ ಗ್ರಾಮದ ಲೇ. ಗವಿಸಿದ್ದಯ್ಯ ಅವರ ಮಗ ಮರಿಜೋಗಿ(೪೫), ಮಹದೇವ್ ಎಂಬವರ ಮಗ ಪ್ರಕಾಶ್ (೩೩) ಹಾಗೂ ನಾಗರಾಜು ಎಂಬವರ ಮಗ ಸಂತೋಷ್(೧೯) ಮೃತಪಟ್ಟವರು.
ಚಿಟಗಯ್ಯನಕೊಪ್ಪಲು ಗ್ರಾಮದಿಂದ ನೆರಗ್ಯಾತನಹಳ್ಳಿ ಹೋಗುವ ರಸ್ತೆಯಲ್ಲಿ ಹಲ್ಲಿನ ಜೋಳ ಬಿಡಿಸುವ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಅದರಲ್ಲಿ ಕುಳಿತಿದ್ದ ಈ ಮೂವರು ಮೃತಪಟ್ಟಿದ್ದಾರೆ.
ಎಸ್‌ಪಿ ಭೇಟಿ: ಸ್ಥಳಕ್ಕೆ ಎಸ್‌ಪಿ ಆರ್. ಚೇತನ್, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಗೋವಿಂದರಾಜು ಹಾಗೂ ಇನ್‌ಸ್ಪೆಕ್ಟರ್ ಕೃಷ್ಣಪ್ಪ, ಅಪರಾಧ ವಿಭಾಗದ ಪಿಎಸ್‌ಐ ಪಚ್ಚೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.





