ಮದ್ದೂರು: ತಂದೆಯೊಂದಿಗೆ ಮೀನು ಹಿಡಿಯಲು ತೆರಳಿದ್ದ ಪುತ್ರ ಶಿಂಷಾ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಪಟ್ಟಣದ ಕೊಲ್ಲಿ ವೃತ್ತದ ಶಿಂಷಾ ನದಿ ದಡದಲ್ಲಿ ಮೀನು ಹಿಡಿಯುತ್ತಿದ್ದ ಹೊಳೆಬೀದಿ ಹಳೇ ಮಸೀದಿ ರಸ್ತೆ ನಿವಾಸಿ ಅಹಮದ್ ಉಲ್ಲಾಖಾನ್ ಅವರ ಪುತ್ರ ಮುಹೀನ್ ಪಾಷಾ (೧೮) ಮೃತಪಟ್ಟ ಯುವಕ.
ಶಿಂಷಾ ನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ಮೃತನ ಸಹಪಾಠಿ ನದಿಯಲ್ಲಿ ಈಜಾಡುತ್ತಿದ್ದಾಗ ತಾನು ಈಜಲು ಹೋದಾಗ ಕಾಲುಜಾರಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ತಂದೆ ಎದುರೇ ಕೊಚ್ಚಿ ಹೋಗಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಮೃತ ದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.