Mysore
19
scattered clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಮಂಜಿನ ನಗರಿಯಲ್ಲಿ ಆಕರ್ಷಿಸಿದ ದಶಮಂಟಪಗಳ ಶೋಭಾಯಾತ್ರ

ಗಮನ ಸೆಳೆದ ಚಲನವಲನವನ್ನೊಳಗೊಂಡ ಕಲಾಕೃತಿಗಳ ಕಥಾ ಹಂದರ: ಕುಣಿದು ಕುಪ್ಪಳಿಸಿದ ಯುವ ಸಮೂಹ

ಮಡಿಕೇರಿ: ಮಂಜಿನ ನಗರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆ ಬುಧವಾರ ರಾತ್ರಿ ನೋಡುಗರ ಮೈನವಿರೇಳಿಸಿತು. ದೇವತೆಗಳ ಲೀಲೆಗಳನ್ನು ಬಿಂಬಿಸೋ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನ ಸೆಳೆಯಿತು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಶೋಭಾಯಾತ್ರೆ ನೋಡಲು ಮುಗಿಬಿದ್ದರು. ರಾತ್ರಿಯಿಡಿ ಮಂಜಿನ ನಗರಿಯ ರಸ್ತೆಗಳಲ್ಲಿ ಜನ ಸಾಗರವೇ ಸೇರಿತ್ತು. ದಶಮಂಟಪಗಳ ಪ್ರದರ್ಶನ ನಗರದ ಬೀದಿ ಬೀದಿಗಳಲ್ಲಿ ಪ್ರದರ್ಶನಗೊಂಡಿತು. ಜನರಲ್ ತಿಮ್ಮಯ್ಯ ವೃತ್ತದಿಂದ ಇಂದಿರಾಗಾಂಧಿ ವೃತ್ತದವರೆಗಿನ ರಸ್ತೆಯಲ್ಲಿ ಬಹುತೇಕ ಮಂಟಪಗಳ ಪ್ರದರ್ಶನ ಇದ್ದಿದ್ದರಿಂದ ಜನ ಜಂಗುಳಿಯಿಂದ ನೂಕುನುಗ್ಗಲು ಉಂಟಾಯಿತು.

ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳುವ ದಶಮಂಟಪಗಳು ದಶ ದೇವಾಲಯಗಳನ್ನು ಪ್ರತಿನಿಧಿಸಿದವು. ಶ್ರೀ ಕಂಚಿಕಾಮಾಕ್ಷಿ ದೇವಾಲಯ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಪೇಟೆ ಶ್ರೀ ರಾಮ ಮಂದಿರ, ಶ್ರೀ ಕೋದಂಡ ರಾಮ ದೇವಾಲಯ, ಭಗವತಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ದೇಚೂರು ಶ್ರೀ ರಾಮಮಂದಿರ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ, ಕೋಟೆ ಶ್ರೀ ಮಹಾಗಣಪತಿ ದೇವಾಲಯ, ಕುಂದೂರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯಗಳ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.

ಪ್ರತಿ ದೇವಾಲಯಗಳು ಕೂಡ ಧಾರ್ಮಿಕ ಹಿನ್ನಲೆಯನ್ನು ಹೊಂದಿದ್ದು, ಈ ದೇಗುಲಗಳ ಕಾರ್ಯಕರ್ತರು ಹಗಲಿರುಳು ಎನ್ನದೆ ಬೆವರು ಸುರಿಸಿ ಶ್ರಮಪಟ್ಟು ನಿರ್ಮಿಸಿದ ಮಂಟಪಗಳು ದಸರಾದ ಪ್ರಮುಖ ಆಕರ್ಷಣೆಯಾಗಿತ್ತು. ದಸರಾ ಆರಂಭವಾಗಲು ಮೂರ‍್ನಾಲ್ಕು ತಿಂಗಳು ಇರುವಂತೆಯೇ ದಶದೇಗುಲದ ಮಂಟಪಗಳ ಸಮಿತಿಯ ಸದಸ್ಯರು ಮಂಟಪವನ್ನು ಅದ್ಧೂರಿಯಾಗಿ ತಯಾರು ಮಾಡುವ ಸಿದ್ಧತೆಯಲ್ಲಿ ತೊಡಗಿದ್ದರು. ಊರೂರು ಸುತ್ತಿ ಜನರಿಂದ ತನು ಮನ ಧನದ ಸಹಾಯ ಪಡೆದು, ಪೌರಾಣಿಕ ಕಥಾ ಹಂದರದಲ್ಲಿ ದೇವರ ಹಾಗೂ ದಾನವರ ಕಲಾಕೃತಿಗಳನ್ನು ಸಂಬಂಧಿಸಿದ ನುರಿತ ಕಲಾವಿದರಿಂದ ತಯಾರು ಮಾಡಿದ್ದರು. ತಂತ್ರಜ್ಞರ ಸಹಾಯದೊಂದಿಗೆ ಕಲಾಕೃತಿಗಳಿಗೆ ಚಲನವಲನಗಳನ್ನು ನೀಡಲಾಗಿತ್ತು. ಮಂಟಪಗಳಲ್ಲಿನ ಫೈರ್ ವರ್ಕ್ ನೋಡುಗರ ಕಣ್ಮನ ಸೆಳೆಯಿತು.

ಮಂಟಪಗಳಲ್ಲಿ ಅಳವಡಿಸಲಾಗಿದ್ದ ಬಾರೀ ಶಬ್ದಗಳ ದ್ವನಿವರ್ಧಕಗಳು ಯುವಕರನ್ನು ಆಕರ್ಷಿಸಿತು. ಚಲನಚಿತ್ರ ಹಾಗೂ ಡಿಜೆ ಹಾಡುಗಳು ಯುವಸಮೂಹವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಶೋಭಾಯಾತ್ರೆಯುದ್ದಕ್ಕೂ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ದಶಮಂಟಪಗಳ ಶೋಭಾಯಾತ್ರೆ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು. ಅಗತ್ಯವಿರುವೆಡೆ ಸಿಸಿ ಕ್ಯಾಮಾರಾಗಳನ್ನು ಅಳವಡಿಸಲಾಗಿತ್ತು. ಸಮೀಪದ ಚಾಮರಾಜನಗರ, ಹಾಸನ ಸೇರಿದಂತೆ ಮತ್ತಿತರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಪ್ರತಿ ಮಂಟಪದ ಬಳಿಯೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮುನ್ನಚ್ಚರಿಕಾ ಕ್ರಮವಾಗಿ ನಗರದಲ್ಲಿ ಮದ್ಯ ಮಾರಾಟವನ್ನು ನಿಷೇದಿಸಲಾಗಿತ್ತು.

ದಸರಾ ಹಿನ್ನೆಲೆ ಕಳೆದ ೨-೩ ದಿನಗಳಿಂದ ಮಡಿಕೇರಿ ನಗರದಲ್ಲಿ ವಾಹನ ದಟ್ಟಣೆ ಕಂಡುಬಂತು. ಬುಧವಾರ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಇದ್ದಿದ್ದರಿಂದ ಮಧ್ಯಾಹ್ನ ೨ ಗಂಟೆ ವೇಳೆಗೆ ನಗರದಲ್ಲಿದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು. ಬೆಳಿಗ್ಗೆಯಿಂದಲೇ ದ್ವನಿವರ್ಧಕಗಳ ಮೂಲಕ ಚಾಲಕರಿಗೆ ಪೊಲೀಸರು ಮಾಹಿತಿ ನೀಡಿದರು. ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಆರ್‌ಎಂ.ಸಿ ಮೈದಾನ, ಕ್ರಸೆಂಟ್ ಶಾಲಾ ಮೈದಾನ, ಹಿಂದುಸ್ಥಾನಿ ಶಾಲಾ ಮೈದಾನ, ಐಟಿಐ ಕಾಲೇಜು ಮೈದಾನ, ಶಾಂತಿ ಚರ್ಚ್ ಮೈದಾನ, ಮ್ಯಾನ್ಸ್ ಕಾಂಪೌಂಡ್, ಜೂನಿಯರ್ ಕಾಲೇಜು ಮೈದಾನಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ದಸರಾ ಸಮಿತಿ ಅತ್ಯುತ್ತಮ ಹಾಗೂ ವಿಭಿನ್ನ ಅಲಂಕಾರ ನಡೆಸಿದ ಕಟ್ಟಡಗಳಿಗೆ ಸ್ಪರ್ಧೆ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ನಗರದ ಕಟ್ಟಡಗಳು, ದೇವಾಸ್ಥಾನಗಳು, ಕಚೇರಿಗಳು ವಿದ್ಯುತ್ ದೀಪದ ಅಲಂಕಾರದಿಂದ ಕಂಗೊಳಿಸಿ, ಹಬ್ಬದ ಕಳೆ ತಂದಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!