Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬಹುನಿರೀಕ್ಷೆಯ ಬಹುರೂಪಿಗೆ ಮಂದಗತಿಯ ಸಿಂಗಾರ

ಅಲ್ಲಲ್ಲಿಯೇ ಬಿದ್ದಿರುವ ಬ್ಯಾನರ್‌ಗಳನ್ನು ಕಟ್ಟುವ ರಿಪೀಸ್ ಪಟ್ಟಿಗಳು, ಬ್ಯಾನರ್‌ಗಳು

-ಬಿ.ಎನ್.ಧನಂಜಯಗೌಡ

ಮೈಸೂರು: ರಂಗಾಯಣದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಬಹುರೂಪಿಯ ರಾಷ್ಟ್ರೀಯ ರಂಗೋತ್ಸವಕ್ಕೆ ಚಾಲನೆ ದೊರೆತರೂ ರಂಗಾಯಣ ಹಾಗೂ ಕಲಾಮಂದಿರದ ಆವರಣದಲ್ಲಿ ಇನ್ನೂ ಬಹುರೂಪಿ ಕಳೆಗಟ್ಟಿಲ್ಲ.

ಪ್ರತಿವರ್ಷ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಮೊದಲನೇ ದಿನವೇ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿ ಗಣ್ಯರಿಂದ ಚಾಲನೆ ಕೊಡಿಸಲಾಗುತ್ತಿತ್ತು. ಆನಂತರ ನಾನಾ ವೇದಿಕೆಯಲ್ಲಿ ಜನಪದೋತ್ಸವ, ಚಲನಚಿತ್ರೋತ್ಸವ, ನಾಟಕೋತ್ಸವ, ವಿಚಾರ ಸಂಕಿರಣ ಇತ್ಯಾದಿ ಕಾರ್ಯಕ್ರಮಗಳು ಸಮಾನವಾಗಿ ಆರಂಭವಾಗುತ್ತಿದ್ದವು. ಆದರೆ, ಈ ಬಾರಿ ಬಹುರೂಪಿ ರಂಗೋತ್ಸವದ ಅಂಗವಾಗಿ ಜನಪದೋತ್ಸವ, ಚಲನಚಿತ್ರೋತ್ಸವ, ಕರಕುಶಲ ಮೇಳ ಈಗಾಗಲೇ ಆರಂಭವಾಗಿದ್ದರೂ ರಂಗಾಯಣ ಮಾತ್ರ ಇನ್ನೂ ಬಹುರೂಪಿಗೆ ಸಂಪೂರ್ಣವಾಗಿ ಸಿಂಗಾರಗೊಂಡಿಲ್ಲ.

ಸಿಎಂ ಉದ್ಘಾಟನೆ: ಮುಖ್ಯಮಂತ್ರಿಯಿಂದಲೇ ಕಾರ್ಯಕ್ರಮವನ್ನು ಉದ್ಘಾಟಿಸಬೇಕು ಎಂಬ ಉದ್ದೇಶದಿಂದ ಎರಡು ದಿನಗಳು ತಡವಾಗಿ ಈ ಬಾರಿಯ ಬಹುರೂಪಿ ನಾಟಕೋತ್ಸವ ಉದ್ಘಾಟನೆಯಾಗುತ್ತಿದೆ. ಅಂತೆಯೇ ಶನಿವಾರ ಸಂಜೆ ೫.೩೦ಕ್ಕೆ ವನರಂಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಇನ್ನು ಬೆಳಿಗ್ಗೆ ೧೦.೩೦ಕ್ಕೆ ಬಿ.ವಿ.ಕಾರಂತರ ರಂಗ ಚಾವಡಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಆರಂಭವಾಗಲಿದೆ. ನಾನಾ ಕ್ಷೇತ್ರಗಳ ಅತಿಥಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುವರು. ಆದರೂ ಸಿಂಗಾರ ಮಾತ್ರ ಇನ್ನು ಪೂರ್ಣಗೊಂಡಿಲ್ಲ. ಬ್ಯಾನರ್‌ಗಳನ್ನು ಕಟ್ಟುವ ರಿಪೀಸ್ ಪಟ್ಟಿಗಳು, ಬ್ಯಾನರ್‌ಗಳು ಅಲ್ಲಲ್ಲಿಯೇ ಬಿದ್ದಿವೆ. ಕಿರುರಂಗಮಂದಿರದ ಹಿಂಬದಿಯಲ್ಲಿರುವ ಶೌಚಾಗೃಹ ಸ್ವಚ್ಛವಾಗಿಲ್ಲ.

ಬ್ರೋಶರ್‌ಗಳಿಲ್ಲ: ಬಹುರೂಪಿಯ ಅಂಗವಾಗಿ ನಾಟಕ, ಚಲಚಿತ್ರೋತ್ಸವ, ಜನಪದೋತ್ಸವ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಬ್ರೋಶರ್‌ಗಳೇ ಇಲ್ಲವಾಗಿದೆ. ಪ್ರತಿವರ್ಷ ಮೊದಲ ದಿನದಿಂದಲೇ ರಂಗಾಯಣಕ್ಕೆ ಆಗಮಿಸುತ್ತಿದ್ದ ಕಲಾಸಕ್ತರಿಗೆ ಸಿಗುತ್ತಿದ್ದ ಬಹುರೂಪಿ ಬುಲೆಟಿನ್ ಬಹುರೂಪಿಯ ಕಾರ್ಯಕ್ರಮಗಳು ಆರಂಭವಾಗಿ ಎರಡು ದಿನಗಳಾದರೂ ಇನ್ನು ಪ್ರಕಟವಾಗಿಲ್ಲ. ಇನ್ನು ಸಂಬಂಧಪಟ್ಟವರನ್ನು ಬ್ರೋಶರ್ ಬಗ್ಗೆ ಕೇಳಿದರೆ, ಪ್ರಿಂಟ್‌ಗೆ ಹೋಗಿದೆ ಶನಿವಾರ ಮಧ್ಯಾಹ್ನ ಸಿಗಲಿದೆ ಎನ್ನುತ್ತಾರೆ.

ವೇದಿಕೆಗಳಲ್ಲಿ ಏನೂ ಇಲ್ಲ: ರಂಗಾಯಣದ ಪ್ರತಿ ವೇದಿಕೆಯೂ ತನ್ನದೇ ಆದ ಪ್ರಾಮುಖ್ಯತೆಯಿಂದ ಗುರುತಿಸಲ್ಪಟ್ಟಿವೆ. ಪ್ರತಿವರ್ಷ ರಂಗಾಯಣದ ಎಲ್ಲ ವೇದಿಕೆಗಳಲ್ಲಿಯೂ ಒಂದಲ್ಲ ಒಂದು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಕಿಂದರಜೋಗಿ ಆವರಣ ಮತ್ತು ಕಿರುರಂಗ ಮಂದಿರದ ಬಳಿ ಇರುವ ಜನಪದರಂಗದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಬೀದಿ ನಾಟಕದಂತಹ ಕಾರ್ಯಕ್ರಮಗಳ ಆಯೋಜನೆಯೂ ಇಲ್ಲವಾಗಿದೆ.

ಈ ಬಾರಿ ಬಹುರೂಪಿ ನಾಟಕೋತ್ಸವ ಉದ್ಘಾಟನೆ ಏಕೆ ತಡವಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಗುರುವಾರವೇ ಉದ್ಘಾಟನೆ ಎಂದು ಜನಪದೋತ್ಸವಕ್ಕೆ ಬಂದರೆ, ಇಲ್ಲಿ ಬಹುರೂಪಿ ನಾಟಕೋತ್ಸವದ ವಾತಾವರಣವೇ ಇಲ್ಲ. ನಾನು ಪ್ರತಿ ವರ್ಷವೂ ಬಹುರೂಪಿಯ ಅಷ್ಟೂ ದಿನಗಳು ಬಂದು ಕಾರ್ಯಕ್ರಮಗಳನ್ನು ಎಂಜಾಯ್ ಮಾಡುತ್ತಿದ್ದೆ. ಆದರೆ, ಈ ಬಾರಿ ಏನೋ ಕಳೆಯೇ ಇಲ್ಲವಾಗಿದೆ.
-ವೀರೇಶ್ ಹರಿಹರ, ಕಲಾಸಕ್ತರು.  

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ