Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ : ಕಾಂಗ್ರೆಸ್, ಜೆಡಿಎಸ್ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಆರಂಭ

ವರದಿ :ಮಹಾದೇಶ್ ಎಂ ಗೌಡ

ಹನೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿರುವ ಮೂವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಲು ಶಾಸಕ ಆರ್ ನರೇಂದ್ರ ಹಾಗೂ ಕಾರ್ಯಾಧ್ಯಕ್ಷ ಕೆಪಿಸಿಸಿ ಧ್ರುವ ನಾರಾಯಣ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆ ಕಾಂಗ್ರೆಸ್, ಜೆಡಿಎಸ್ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಇತರೆ ಪಕ್ಷಗಳ ಕಾರ್ಯಕರ್ತರನ್ನು ಸೆಳೆಯುವಲ್ಲಿ ನಾಯಕರುಗಳು ತಲ್ಲಿನರಾಗಿದ್ದಾರೆ.

ಚಾಮುಲ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗುರುಮಲ್ಲಪ್ಪ ಪರಾಭವಗೊಂಡ ಹಿನ್ನೆಲೆ,ನನ್ನ ಸೋಲಿಗೆ ಶಾಸಕ ಆರ್ ನರೇಂದ್ರರವರ ನೇರ ಕಾರಣ ಎಂದು ಆರೋಪಿಸಿದ್ದರು. ಶುಕ್ರವಾರ ಚಾಮುಲ್ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಗುರುಮಲ್ಲಪ್ಪ ರವರನ್ನು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಗುರುಮಲ್ಲಪ್ಪನವರು ಸಹಾ ಸಕರಾತ್ಮಕವಾಗು ಸ್ಪಂದಿಸಿದ್ದಾರೆ ಎನ್ನಲಾಗಿದೆ.

2013 ರ ವರೆಗೂ ಎರಡು ಮನೆತನಗಳಿಗೆ ಸೀಮಿತವಾಗಿದ್ದ ರಾಜಕೀಯ 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಮೂಲದ ಎಂ ಆರ್ ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿ 44 ಸಾವಿರ ಮತ ಪಡೆಯುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದರು. ಮಾಜಿ ಸಚಿವ ದಿ ಎಚ್ ನಾಗಪ್ಪ ರವರ ಆತ್ಮೀಯರಾಗಿದ್ದ ಪೊನ್ನಾಚಿ ಮಹದೇವಸ್ವಾಮಿ 2008 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 7087, 2013 ಕೆಜೆಪಿಯಿಂದ ಸ್ಪರ್ಧಿಸಿ 11629 ಸಾವಿರ ಮತಪಡೆದಿದ್ದರು. ಇನ್ನೂ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಡಾ.ದತ್ತೇಶ್ ಕುಮಾರ್ ಪಕ್ಷೇತರವಾಗಿ ಸ್ಪರ್ಧಿಸಿ 13.258 ಸಾವಿರ ಮತಗಳನ್ನು ಪಡೆದಿದ್ದರು

ಸೋತರೂ ಎದೆಗುಂದದ ಎಂ ಆರ್ ಮಂಜುನಾಥ್: 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ ಆರ್ ಮಂಜುನಾಥ್ ಗೆ ಟಿಕೆಟ್ ಸಿಗದೆ ಜೆಡಿಎಸ್ ನಿಂದ ಸ್ಪರ್ಧಿಸಿ ಮಂಜುನಾಥ 44457ಸಾವಿರ ಮತಗಳನ್ನು ಪಡೆಯುವ ಮೂಲಕ 2 ಮನೆತನಗಳಿಗೆ ಶಾಕ್ ನೀಡಿದ್ದರು.ಇದೀಗ ಇವರು ಕಳೆದ ಚುನಾವಣೆಯಲ್ಲಿ ಪರಾಭವಗೊಂಡರೂ ಪಕ್ಷದ ಸಂಘಟನೆ ಹಾಗೂ ಬಡವರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ಪಕ್ಷ ಸಂಘಟನೆಯತ್ತ ತೊಡಗಿಸಿಕೊಂಡಿದ್ದಾರೆ.

ಜೆಡಿಎಸ್ ತೊರೆದ ಹಲವು ನಾಯಕರು: ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬುಲೆಟ್ ಬಸವರಾಜು,ಪಟ್ಟಣದ ಪರಿಶಿಷ್ಟ ಸಮಾಜದ ನಾಯಕ ಕಿರಣ್,ರಾಮಾಪುರದ ಮೂರ್ತಿ ಹಾಗೂ ಇನ್ನಿತರರು ಸಮಾಜ ಸೇವಕ ನಿಶಾಂತ್ ರವರನ್ನು ಸೇರಿಕೊಂಡಿದ್ದಾರೆ. ಇನ್ನು ನಮ್ಮನ್ನು ಯಾವುದೇ ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಜೆಡಿಎಸ್ ಸದಸ್ಯರುಗಳು ಕಾಂಗ್ರೆಸ್ ಸೇರಿಕೊಳ್ಳುತ್ತಿರುವುದು ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ರವರಿಗೆ ಹಿನ್ನಡೆಯಾದಂತಾಗಿದೆ.

ಬಿಜೆಪಿಯಲ್ಲಿ ಮನೆಯೊಂದು 4 ಬಾಗಿಲು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಬಿಜೆಪಿ ಮುಖಂಡ ಪ್ರೀತಂ ನಾಗಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ರಾಜ್ಯ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸದಸ್ಯ ಜನದ್ವನಿ ಬಿ ವೆಂಕಟೇಶ್ ಕಳೆದ 4 .5ವರ್ಷಗಳಿಂದ ಜನಾಶ್ರಯ ಟ್ರಸ್ಟ್ ಹಾಗೂ ಒಬಿಸಿ ಮೋರ್ಚಾ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮನ್ನಣೆ ಪಡೆದು ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಪಕ್ಷೇತರವಾಗಿ ಸ್ಪರ್ಧಿಸಿದ್ದ ಡಾ. ದತ್ತೇಶ್ ಕುಮಾರ್ ರವರು ಬಿಜೆಪಿಗೆ ಸೇರ್ಪಡೆಯಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ .ಇವರು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಉಳಿದಂತೆ ಸಮಾಜಸೇವೆಯ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ನಿಶಾಂತ್ ರವರು ಸಹ ನಾನು ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಕ್ಷೇತ್ರದೆಲ್ಲೆಡೆ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವುದರಿಂದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಎಳೆಯಲು ಇನ್ನಷ್ಟು ದಿನ ಕಾಯಬೇಕಿದೆ.

ಚುನಾವಣಾ ಪೂರ್ವಭಾವಿ ಸಭೆ : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಆರ್ ನರೇಂದ್ರ ಪೂರ್ವಭಾವಿ ಸಭೆ ನಡೆಸಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೂ ಜಾಗೃತಿ ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವಂತೆ ಕರೆ ನೀಡಿದ್ದಾರೆ.ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಹ್ಯಾಟ್ರಿಕ್ ಜಯ ಗಳಿಸಿರುವ ಶಾಸಕ ಆರ್ ನರೇಂದ್ರ ನಾಲ್ಕನೇ ಬಾರಿಗೆ ಜಯ ಗಳಿಸುವ ವಿಶ್ವಾಸದಲ್ಲಿದ್ದಾರೆ.

ಒಟ್ಟಾರೆ ಈ ಬಾರಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳಿಂದ ಮೂವರು ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ .ಈ ಬಾರಿ ಹನೂರು ಕ್ಷೇತ್ರದ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ