Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಂಗನವಾಡಿ ಕಟ್ಟಡದಲ್ಲಿ ಮೂಡಿದ ಬಣ್ಣದ ಚಿತ್ತಾರ

ಮಕ್ಕಳನ್ನು ಸೆಳೆಯಲು ಮುಳ್ಳುಸೋಗೆ ಗ್ರಾ.ಪಂ.ನಿಂದ ವಿಭಿನ್ನ ಪ್ರಯತ್ನ

ವರದಿ: ಪುನೀತ್ ಮಡಿಕೇರಿ

ಮಡಿಕೇರಿ: ಗೋಡೆಯ ಮೇಲೆ ಕಾಮನ ಬಿಲ್ಲಿನ ಚಿತ್ತಾರ, ಹಬ್ಬಿ ನಿಂತಿರುವ ಹಸಿರಿನ ಬಳ್ಳಿಗಳಲ್ಲಿ ಬಣ್ಣ ಬಣ್ಣದ ಹೂವುಗಳು, ಬೆಟ್ಟ-ಗುಡ್ಡ, ಗರಿಬಿಚ್ಚಿ ಹಾರುವ ಪಕ್ಷಿಗಳ ಕೆಳಗೆ ದಿಟ್ಟಿಸಿ ನೋಡುತ್ತಿರುವ ಸಿಂಹ, ಜಿಂಕೆ, ಆನೆ, ಜಿರಾಫೆ… ಇವು ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದಲ್ಲಿರುವ ವಿನಾಯಕ ಬಡಾವಣೆಯಲ್ಲಿರುವ ಅಂಗನವಾಡಿಯ ಚಿತ್ರಣ.

ಹೌದು, ಟಿಪಿಕಲ್ ಸರ್ಕಾರಿ ಕಚೇರಿಯಂತೆ ಕಾಣುತ್ತಿದ್ದ ಹಳೆಯ ವಿನಾಯಕ ಬಡಾವಣೆಯ ಅಂಗನವಾಡಿಗೆ ಈಗ ಹೊಸ ರೂಪ ಸಿಕ್ಕಿದೆ. ಕಾಮನಬಿಲ್ಲಿನೊಳಗೆ ಅದ್ದಿ ತೆಗೆದಂತೆ ಬಣ್ಣ ಬಣ್ಣದಲ್ಲಿ ಮಿಂಚುತ್ತಿರುವ ಹೊಸ ಅಂಗನವಾಡಿ ಕಟ್ಟಡ ಮಕ್ಕಳ ಗಮನ ಸೆಳೆಯುತ್ತಿದೆ. ವಿವಿಧ ಪ್ರಾಣಿಗಳ ಚಿತ್ತಾರಗಳು ಪುಟ್ಟ ಕಂದಮ್ಮಗಳನ್ನು ಆಕರ್ಷಿಸುತ್ತಿವೆ.

೧೫ನೇ ಹಣಕಾಸು ಯೋಜನೆಯಡಿಯಲ್ಲಿ ೩.೫ ಲಕ್ಷ ರೂ. ವ್ಯಯಿಸಿ, ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಹಳೆಯ ಅಂಗನವಾಡಿಗೆ ಹೊಸ ರೂಪ ಕೊಡಲಾಗಿದೆ. ಅಂಗನವಾಡಿಯ ಹೊರಗೋಡೆ ಮಾತ್ರವಲ್ಲದೆ ಒಳಗೋಡೆಗಳನ್ನೂ ಚಿತ್ತಾಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ಅಂಗನವಾಡಿಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿಯುವ ಮಗು ಕೂಡ ಖುಷಿಯಿಂದ ಆಡುತ್ತಾ ಬರುವಂತೆ ಇಲ್ಲಿಯ ವಾತಾವರಣ ರೂಪಿಸಲಾಗಿದೆ. ಅಂಗನವಾಡಿಯ ಒಳಾಂಗಣದಲ್ಲಿ ಟೈಲ್ಸ್ ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುತ್ತ ಆವರಣ ಗೋಡೆಯನ್ನೂ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ. ಪೌಷ್ಟಿಕ ತೋಟ, ಒಳಾಂಗಣ ಹಾಗೂ ಹೊರಾಂಗಣದ ವರ್ಣರಂಜಿತ ನೋಟಗಳ ಮೂಲಕ ಕಲಿಕಾ ಸ್ನೇಹಿಯಾಗಿ ರೂಪುಗೊಳಿಸಲಾಗಿದೆ.

ನಿವೃತ್ತ ನೌಕರರ ಕೂಟದವರಿಂದ ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ

ಪುಟಾಣಿ ಕುರ್ಚಿಗಳ ಕೊಡುಗೆ
ಇಲ್ಲಿಗೆ ಬರುವ ಪುಟಾಣಿಗಳಿಗೆ ಸೂಕ್ತ ಆಸನ ವ್ಯವಸ್ಥೆಯ ಕೊರತೆ ಕಾಡುತ್ತಿತ್ತು. ಆಗ ನೆರವಿಗೆ ಬಂದವರು ನಿವೃತ್ತ ನೌಕರರ ಕೂಟದ ಸದಸ್ಯರು. ಅಂಗನವಾಡಿಗೆ ಸಿಕ್ಕಿದ ಹೊಸ ರೂಪದಿಂದ ಪ್ರೇರೇಪಿತರಾದ ನಿವೃತ್ತ ನೌಕರರ ಕೂಟದವರು ತಮ್ಮ ಮೊಮ್ಮಕ್ಕಳು, ಮರಿಮಕ್ಕಳಂಥ ಕಂದಮ್ಮಗಳಿಗಾಗಿ ಪುಟಾಣಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲು ಮುಂದೆ ಬಂದರು. ಇದೀಗ ಹೊಸ ಅಂಗನವಾಡಿಯಲ್ಲಿ ಹೊಸ ಹೊಸ ಕುರ್ಚಿಗಳಲ್ಲಿ ಕುಳಿತು ಮಕ್ಕಳು ನಗು ಬೀರುತ್ತಿದ್ದಾರೆ.

ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಂಗನವಾಡಿಗಳಲ್ಲೂ ಕಲಿಕಾ ಸ್ನೇಹಿ ವಾತಾವರಣವನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ಈ ಗುರಿ ಸಾಧಿಸಲಾಗುವುದು. ಗೊಂದಿ ಬಸವನಹಳ್ಳಿ ಅಂಗನವಾಡಿಯನ್ನು ೧ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗುವುದು. ಜನತಾ ಕಾಲೋನಿ ಅಂಗನವಾಡಿಗೆ ಈಗಾಗಲೇ ೧ ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನೂ ೧ ಲಕ್ಷ ರೂ. ವ್ಯಯಿಸಿ ಉತ್ತಮ ರೂಪ ನೀಡಲಾಗುವುದು. – ಎಂ.ಆರ್.ಸುಮೇಶ್, ಮುಳ್ಳುಸೋಗೆ ಪಿಡಿಒ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ