ವಿಜಯನಗರದಲ್ಲಿ ೬೦ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಜಿ.ಟಿ.ದೇವೇಗೌಡ
ಮೈಸೂರು: ವಿಜಯನಗರ ಮೂರನೇ ಹಂತದ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳ ಡಾಂಬರೀಕರಣ ಮಾಡಲು ೬೦ ಕೋಟಿ ರೂ. ಮಂಜೂರು ಮಾಡಲಾಗಿದೆ. ಅದೇ ರೀತಿ ವಿಜಯನಗರ ನಾಲ್ಕನೇ ಹಂತಕ್ಕೆ ೬೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಜಯನಗರ ಮೂರನೇ ಹಂತದಲ್ಲಿ ಕೈಗೊಂಡಿರುವ ೬೦ ಕೋಟಿ ರೂ. ವೆಚ್ಚದ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಮುಡಾದಲ್ಲಿ ನಿಧಿ ಒಂದು, ನಿಧಿ ಎರಡು ಹಂತ ಎಂದು ವರ್ಗೀಕರಣ ಮಾಡಿದ್ದಲ್ಲದೆ, ಕಾಮಗಾರಿಯನ್ನು ಕೈಗೆತ್ತಿಕೊಳ್ಳದಂತೆ ಸರ್ಕಾರ ಸೂಚನೆ ನೀಡಿದ್ದರಿಂದ ಮೂರು ವರ್ಷಗಳ ಕಾಲ ಯಾವುದೇ ಕಾಮಗಾರಿಯನ್ನೂ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ನಂತರ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟ ಮೇಲೆ ಅನುದಾನ ಬಿಡುಗಡೆಯಾಗಿದ್ದರಿಂದ ಮುಡಾ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಮುಡಾ ಅಧೀಕ್ಷಕ ಅಭಿಯಂತರ ಚನ್ನಕೇಶವಯ್ಯ, ಮುಖಂಡರಾದ ಮಂಜುನಾಥ್, ರವಿಕುಮಾರ್ ಇನ್ನಿತರರು ಹಾಜರಿದ್ದರು.





