ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ರಾಜ್ಯದ ಗಡಿ ದಾಟಲು ಯತ್ನಿಸಿದ ಕೇರಳ ಮೂಲದ ನಾಲ್ವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಕಿಡಿಗೇಡಿಗಳ ಬಳಿ ಬಾಲಕಿ ಭಿಕ್ಷೆ ಬೇಡಲು ಬಂದಾಗ ಬಾಲಕಿಯನ್ನು ಅಪಹರಿಸಿ ಬಾಯಿಗೆ ಬಟ್ಟೆ ತುರುಕಿ ಕಾರಿನಲ್ಲಿ ಕೂರಿಸಿಕೊಂಡು ರಾಜ್ಯದ ಗಡಿ ದಾಟಲು ಮುಂದಾಗಿದ್ದಾರೆ.
ಈ ವೇಳೆ ಕೊಳ್ಳೇಗಾಲ ಸಮೀಪದ ಮಧುವನಹಳ್ಳಿ ಬಳಿ ಕಾರು ಅಪಘಾತವಾಗಿದ್ದು, ಅಲ್ಲಿನ ಗ್ರಾಮಸ್ಥರು ವೇಗವಾಗಿ ಕಾರು ಚಲಾಯಿಸಿದ್ದಕ್ಕೆ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಅಪ್ರಾಪ್ತ ಬಾಲಕಿ ಇರುವುದು ಕಂಡುಬಂದಿದೆ.
ಇದನ್ನು ಕಂಡು ಕಿಡಿಗೇಡಿಗಳಿಗೆ ಗ್ರಾಮಸ್ಥರು ಚೆನ್ನಾಗಿ ಥಳಿಸಿ ಬಾಲಕಿಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಸ್ಥರನ್ನು ಕಂಡ ಕೂಡಲೇ ತನ್ನನ್ನು ಕಿಡಿಗೇಡಿಗಳು ಭಿಕ್ಷೆ ಬೇಡಲು ಕಾರಿನ ಬಳಿ ಬಂದಾಗ ಅಪಹರಿಸಿ ಬಾಯಿಗೆ ಬಟ್ಟೆ ತುರುಕಿ ಕರೆದುಕೊಂಡು ಬಂದರು ಎಂದು ಕಣ್ಣೀರಿಡುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾಳೆ.





