ಕೊಳ್ಳೇಗಾಲ: ಪಟ್ಟಣದಲ್ಲಿ ಕಳೆದ ವಾರ ಪಾನಿಪೂರಿ ವ್ಯಾಪಾರಿಯೊಬ್ಬನಿಗೆ ಫೋನ್ ಪೇ ಮಾಡುವ ನೆಪದಲ್ಲಿ ಅಂಗಡಿಯವನ ಮೊಬೈಲ್ ಪಡೆದು ತನ್ನ ಖಾತೆಗೆ 30 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡು ಕಾಲ್ಕಿತ್ತಿದ್ದ ಬೆಂಗಳೂರಿನ ವಿಶಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೋಸ ಹೋಗಿದ್ದ ಪಾನಿಪೂರಿ ವ್ಯಾಪಾರಿ ಮರುದಿನ ಬ್ಯಾಂಕ್‌ನಲ್ಲಿ ಹಣ ಪಡೆಯಲು ಯತ್ನಿಸಿದಾಗ 30 ಸಾವಿರ ರೂ. ಫೋನ್ ಪೇ ಮುಖಾಂತರ ಬೆಂಗಳೂರಿನ ವಿಶಾಲ್ ಅಕೌಂಟ್‌ಗೆ ಜಮೆಯಾಗಿರುವುದು ತಿಳಿದುಬಂದಿತ್ತು. ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪಟ್ಟಣ ಠಾಣೆಯ ಪೊಲೀಸರು ಈ ಪ್ರಕರಣವನ್ನು ಸೈಬರ್ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿದರು. ತನಿಖೆ ನಡೆಸಿದ ಸೈಬರ್ ಪೊಲೀಸರು ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ಈತನಿಂದ 30 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





