Mysore
31
scattered clouds
Light
Dark

ಸೆಪ್ಟೆಂಬರ್‌ 4ರಂದು ನಗರದಲ್ಲಿ ನಡೆದ ಅಪರಾಧ ಪ್ರಕರಣಗಳು

ಕಾರು ಗುದ್ದಿ ರಸ್ತೆ ದಾಟುತ್ತಿದ್ದ ಮಹಿಳೆ ಸಾವು

ಮೈಸೂರು: ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಮೈಸೂರು- ನಂಜನಗೂಡು ರಸ್ತೆಯ ಮರಸೆ ಗೇಟ್ ಬಳಿ ಮಂಗಳವಾರ ನಡೆದಿದೆ. ನಂಜನಗೂಡು ತಾಲ್ಲೂಕಿನ ಹಳ್ಳಿದಿಡ್ಡಿ ಗ್ರಾಮದ ನಿವಾಸಿ ನಂಜಮ್ಮ(46) ಮೃತಪಟ್ಟವರು.

ನಂಜಮ್ಮ ಅವರು ಶನೇಶ್ವರ ದೇವಾಲಯಕ್ಕೆ ಹೋಗಿ ಬರುವ ಸಲುವಾಗಿ ಹಳ್ಳಿದಿಡ್ಡಿ ಗ್ರಾಮದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊರಟು ಮಧ್ಯಾಹ್ನ 2.30ರ ವೇಳೆಯಲ್ಲಿ ನಂಜನಗೂಡು ರಸ್ತೆಯ ಮರಸೆ ಗೇಟ್‌ನಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಆಕೆಗೆ ಗುದ್ದಿದೆ. ಇದರಿಂದ ತಲೆಯ ಭಾಗಕ್ಕೆ ಪೆಟ್ಟು ಬಿದ್ದ ಪರಿಣಾಮ ಅವರು ಸ್ಥಳ ದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ಕಾರನ್ನು ನಿಲ್ಲಿಸದೇ ಹೊರಟು ಹೋಗಿದ್ದಾನೆ.

ತಕ್ಷಣ ಸ್ಥಳೀಯರು ದಕ್ಷಿಣ ಗ್ರಾಮಾಂತರ ಠಾಣೆಯ ಸಿಬ್ಬಂದಿ ಗಮನಕ್ಕೆ ತಂದಿ ದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವರದಕ್ಷಿಣೆ ಕಿರುಕುಳ; ಗೃಹಿಣಿ ಆತ್ಮಹತ್ಯೆ

ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು 15 ದಿನಗಳಿಂದ ತವರಿನಲ್ಲಿದ್ದ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿ ನಡೆದಿದೆ.

ಇಲ್ಲಿನ ಅಮೃತೇಶ್ವರನಗರದ ಲಕ್ಷ ಮ ಅವರ ಪುತ್ರಿ ಜೆ.ಶಿಲ್ಪಾ(22) ಸೋಮವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ಪತಿ ಹಾಗೂ ಅತ್ತೆ ವಿರುದ್ದ ಮೈಸೂರಿನ ವಿಜಯನಗರ ಠಾಣೆಯಲ್ಲಿ ವರ ದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.

ಕೂಲಿ ಮಾಡಿಕೊಂಡು ಜೀವನ ನಡೆಸು ತ್ತಿರುವ ಲಕ್ಷ್ಮಮ್ಮ ಅವರ ಮೂರು ಮಕ್ಕಳಲ್ಲಿ ಎರಡನೆಯವರಾದ ಶಿಲ್ಪಾ ಅವರನ್ನು ರಾಮನಗರ ಜಿಲ್ಲೆ, ಹೊಸ ದೊಡ್ಡಿ ಗ್ರಾಮದ ಮಹೇಶ್(32) ಎಂಬಾತನೊಂದಿಗೆ 2021ರ ಏಪ್ರಿಲ್ 19ರಂದು ವಿವಾಹ ಮಾಡಿಕೊಡಲಾಗಿತ್ತು.

ಆಗ ಮದುವೆ ಮಾಡಿಕೊಟ್ಟರೆ ಸಾಕು ಎಂದಿದ್ದವರು ದಿನ ಕಳೆದಂತೆ ವರದಕ್ಷಿಣೆಗೆ ಪೀಡಿಸುತ್ತಿದ್ದರಂತೆ. ಬೇಡ ಎಂದರೂ ವಿವಾಹದ ಸಂದರ್ಭದಲ್ಲಿ 23 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಶಿಲ್ಪಾ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ತೆರಳುವಾಗಲೂ 20 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಆದರೂ ವರದಕ್ಷಿಣೆಗಾಗಿ ಶಿಲ್ಪಾಗೆ ಪತಿ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಶಿಲ್ಪಾ ಅವರನ್ನು ತವರಿಗೆ ಕರೆದುಕೊಂಡು ಬರಲಾಗಿತ್ತು. ಎಷ್ಟೇ ಸಮಾಧಾನ ಹೇಳಿದರೂ ಮತ್ತೆ ಕಿರುಕುಳ ನೀಡುತ್ತಾರೆಂಬ ಭಯದಿಂದ ಪತಿ ಮನೆಗೆ ಹೋಗಲು ಹಿಂದೇಟು ಹಾಕಿದ್ದರು.

ಕಳೆದ ಭಾನುವಾರ ರಾತ್ರಿ ಊಟ ಮುಗಿಸಿ ಎಲ್ಲರೂ ಮಲಗಿದ್ದರು. ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಶಿಲ್ಪಾ ಅವರ ಮಗು ಅಳುತ್ತಿದ್ದ ಕಾರಣ ಲಕ್ಷ್ಮಮ್ಮ ಅವರು ಕೊಠಡಿಗೆ ಹೋಗಿ ನೋಡಿದಾಗ ಶಿಲ್ಪಾ ಸೀರೆಯಿಂದ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಲಕ್ಷ್ಮಮ್ಮ ನೀಡಿರುವ ದೂರಿನನ್ವಯ ವಿಜಯನಗರ ಠಾಣೆ ಪೊಲೀಸರು, ಶಿಲ್ಪಾ ಪತಿ ಮಹೇಶ್ ಹಾಗೂ ಅತ್ತೆ ರತ್ನಮ್ಮ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಿದ್ದಾರೆ.

ಹಜ್ ಯಾತ್ರೆ ನೆಪದಲ್ಲಿ ಲಕ್ಷಾಂತರ ರೂ. ವಂಚನೆ

ಮೈಸೂರು: ಟ್ರಾವೆಲ್ಸ್ ಸಂಸ್ಥೆಯೊಂದು ಹಜ್ ಯಾತ್ರೆ ಮಾಡಿಸುತ್ತೇವೆ ಎಂದು ನಂಬಿಸಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಡಿಮೊಹಲ್ಲಾದಲ್ಲಿನ ಸಂಸ್ಥೆಯೊಂದು ಹಜ್ ಯಾತ್ರೆ ಮಾಡಿಸುತ್ತೇವೆ ಎಂದು ನಮ್ಮ ಕುಟುಂಬದ ಏಳು ಮಂದಿಯಿಂದ 4.66 ಲಕ್ಷ ರೂ. ಪಾವತಿಸಿಕೊಂಡು ವಂಚಿಸಿದೆ ಎಂದು ಅಜೀಜ್ ಸೇರ್ ನಗರದ ಆಸೀಫ್‌ಖಾನ್ ಎಂಬವರು ದೂರು ನೀಡಿದ್ದಾರೆ. ಮಂಡಿಮೊಹಲ್ಲಾದಲ್ಲಿರುವ ಸುಲೇಮಾನ್ ಎಂಬವರು ಹಜ್ ಯಾತ್ರೆ

ಮಾಡಿಸುವುದಾಗಿ ನಂಬಿಸಿ ಕಳೆದ ಕೆಲ ದಿನಗಳಿಂದ ನಮ್ಮ ಬಳಿ ಹಣ ಪಾವತಿಸಿಕೊಂಡಿದ್ದರು. ಪಾಸ್‌ಪೋರ್ಟ್ ಹಾಗೂ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಕ್ಕ, ತಮ್ಮನನ್ನು ಬೆದರಿಸಿ ಮೊಬೈಲ್ ದರೋಡೆ

ಮೈಸೂರು: ಉದ್ಯಾನವನದಲ್ಲಿ ಕುಳಿತು ಮಾತನಾಡುತ್ತಿದ್ದ ಅಕ್ಕ ತಮ್ಮನ ಮೊಬೈಲ್ ಗಳನ್ನು ಇಬ್ಬರು ದುಷ್ಕರ್ಮಿಗಳು ದೋಚಿರುವ ಘಟನೆ ನಗರದ ಕೆ.ಸಿ.ಬಡಾವಣೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿಗಳಾದ ಫಾತಿಮಾ ಹಾಗೂ ಆಕೆಯ ಸಹೋದರ ಶಾಹಿದ್ ಅವರು ಕಳೆದ ಎರಡು ದಿನಗಳ ಹಿಂದೆ ಪಾಂಡವಪುರದಿಂದ ಅನ್ಯ ಕೆಲಸದ ನಿಮಿತ್ತ ಮೈಸೂರಿಗೆ ಬಂದಿದ್ದವರು, ಸಂಜೆ 5 ಗಂಟೆ ವೇಳೆಯಲ್ಲಿ ಕೆ.ಸಿ.ಬಡಾವಣೆಯ ಉದ್ಯಾನವನದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಯುವಕರು ಇವರನ್ನು ಬೆದರಿಸಿ 40 ಸಾವಿರ ರೂ. ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಕಲಿ ಕಂಪೆನಿಯಲ್ಲಿ ಹೂಡಿಕೆ; ವೈದ್ಯೆಗೆ 23 ಲಕ್ಷ ರೂ. ವಂಚನೆ

ಮೈಸೂರು: ನಕಲಿ ಕಂಪೆನಿಯ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ ವೈದ್ಯೆಯೊಬ್ಬರು 23 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.

ನಗರದ ಜಯನಗರ ನಿವಾಸಿಯಾದ ವೈದ್ಯೆಯು ಆನ್‌ಲೈನ್ ಮೂಲಕ ಷೇರು ಮಾರುಕಟ್ಟೆ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ ತಾವು ಕೂಡ ಕಂಪೆನಿಯೊಂದರ ಮೂಲಕ ಹಣ ಹೂಡಿಕೆ ಮಾಡಿದ್ದಾರೆ. ಮೊದಲಿಗೆ ಸ್ವಲ್ಪಮಟ್ಟಿಗಿನ ಲಾಭವನ್ನು ಕಂಪೆನಿಯವರು ನೀಡಿದ್ದಾರೆ. ನಂತರ ಅವರಿಂದ ಹಂತಹಂತವಾಗಿ 23,21,500 ರೂ.ಗಳನ್ನು ಪಾವತಿಸಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಂಸಿಡಿಸಿಸಿ ಬ್ಯಾಂಕ್ ರಾಮಾಪುರ ಶಾಖೆಯ ಹಿರಿಯ ಸಹಾಯಕ ಅಮಾನತ್ತು

ಮೈಸೂರು: ಎಂಸಿಡಿಸಿಸಿ ಬ್ಯಾಂಕ್ ರಾಮಾಪುರ ಶಾಖೆಯ ಹಿರಿಯ ಸಹಾಯಕ ಸೋಮಶೇಖರ್ ಅವರನ್ನು ದುರ್ನಡತೆ, ನಿಯಮ ಉಲ್ಲಂಘನೆ ಆರೋಪದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ ಬ್ಯಾಂಕ್‌ನ ಪ್ರಭಾರ ಮುಖ್ಯ

ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಅವರು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ. ಈ ಹಿಂದೆ ಹೆಚ್.ಡಿ.ಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಅವರನ್ನು ರಾಮಾಪುರ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಅವರು ಅನಾರೋಗ್ಯ ನಿಮಿತ್ತ 91 ದಿನಗಳವರೆಗೆ ರಜೆಯ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ವರ್ಗಾವಣೆಯಾದ ನಂತರ ರಜೆ ಪಡೆಯಲು ಸಾಧ್ಯವಿಲ್ಲ ಎಂದು ನೋಟಿಸ್ ನೀಡಲಾಗಿತ್ತು.

ಆದರೆ, ಅವರು ನೋಟಿಸ್‌ಗೆ ಉತ್ತರ ನೀಡಿಲ್ಲ ಎನ್ನಲಾಗಿದ್ದು, ಬ್ಯಾಂಕಿನ ಮಾನವ ಸಂಪನ್ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು, ಅವರ ನಡವಳಿಕೆಯಿಂದ ಬ್ಯಾಂಕಿನ ಆರ್ಥಿಕ ಸ್ಥಿತಿಗತಿಗಳ ಮೇಲೆ ಅಡ್ಡ ಪರಿಣಾಮ ಉಂಟಾಗಿರುವುದು, ಬ್ಯಾಂಕಿನ ಮೇಲಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿರುವುದರಿಂದ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಮರ ಬಿದ್ದು ಕಾರು ಜಖಂ

ಮೈಸೂರು: ನಗರದ ಗನ್‌ಹೌಸ್ ಬಳಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬುಧವಾರ ಸಂಜೆ 4 ಗಂಟೆ ವೇಳೆಯಲ್ಲಿ ಚಾಲಕ ತನ್ನ ಸ್ವಿಫ್ಟ್ ಕಾರನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಮರವು ದಿಢೀರನೆ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಇದರಿಂದಾಗಿ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

Tags: