ಮಡಿಕೇರಿ : ಅಕ್ರಮ ಸಂಬಂಧದ ಸಂಶಯದಿಂದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಲ್ಲದೆ, ವ್ಯಕ್ತಿಯೊಬ್ಬರ ಮೇಲೆಯೂ ದೊಣ್ಣೆಯಿಂದ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿಯಲ್ಲಿ ನಡೆದಿದೆ.
ಬಸವನಹಳ್ಳಿಯ ಜಮೀನೊಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಮುರಳಿ(೪೮) ಕೊಲೆಗೀಡಾಗಿರುವ ವ್ಯಕ್ತಿ. ಬಸವನಹಳ್ಳಿಯ ನಿವಾಸಿ, ಕೂಲಿ ಕಾರ್ಮಿಕ ತೀರ್ಥ(೨೫) ಕೊಲೆ ಅರೋಪಿಯಾಗಿದ್ದು, ತೀರ್ಥನ ಪತ್ನಿ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸವನಹಳ್ಳಿ ಗ್ರಾಮದ ನಾಗೇಂದ್ರ ಎಂಬವರ ಜಮೀನನ್ನು ಶುಂಠಿ ಕೃಷಿ ಮಾಡಲು ಮಣಿಕಂಠ ಎಂಬವರು ಲೀಸ್‌ಗೆ ಪಡೆದಿದ್ದರು. ೩ ತಿಂಗಳುಗಳ ಹಿಂದೆ ಕೊಪ್ಪ ಬಳಿಯ ರಾಣಿಗೇಟ್‌ನಲ್ಲಿದ್ದ ಕೇರಳ ಮೂಲದ ಮುರಳಿ ಎಂಬವರನ್ನು ಮಣಿಕಂಠ ತಾವು ಲೀಸ್‌ಗೆ ಪಡೆದಿದ್ದ ಜಮೀನಿನಲ್ಲಿ ಒಂದು ಶೆಡ್ ನಿರ್ಮಿಸಿ ಕಾವಲಿಗೆ ನೇಮಿಸಿದ್ದರು.
ಸಮೀಪದಲ್ಲೇ ಆರೋಪಿ ತೀರ್ಥ ಪತ್ನಿ ಜ್ಯೋತಿಯೊಂದಿಗೆ ವಾಸವಿದ್ದನು. ಶುಕ್ರವಾರ ರಾತ್ರಿ ತೀರ್ಥ ಹಾಗೂ ಜ್ಯೋತಿ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ಕೇಳಿ ಮುರಳಿ, ತೀರ್ಥ ಅವರ ಮನೆಯ ಬಳಿ ಬಂದು ವಿಚಾರಿಸಿದ್ದಾರೆ. ಈ ಸಂದರ್ಭ ಜ್ಯೋತಿ ಹಾಗೂ ಮುರಳಿ ನಡುವೆ ಅಕ್ರಮ ಸಂಬಂಧವಿದೆ ಎಂದು ಅನುಮಾನಗೊಂಡ ತೀರ್ಥ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಜ್ಯೋತಿ ಗಂಬೀರವಾಗಿ ಗಾಯಗೊಂಡಿದ್ದರೆ, ಮುರಳಿ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ಎಸ್‌ಪಿ ಕೆ. ರಾಮರಾಜನ್ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀರ್ಥನನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





