ಮೈಸೂರು : ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ವೇಳೆ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಪಟಾಕಿ ಹಾರಿದ ಪರಿಣಾಮ ಅವರು ತೀವ್ರ ಗಾಯವಾಗಿರುವ ಘಟನೆ ನಡೆದಿದೆ.
ನಗರದ ಶ್ರೀರಾಮ ಸೇನೆ ಮೈಸೂರು ಜಿಲ್ಲಾಧ್ಯಕ್ಷ ಸಂಜಯ್(೫೨) ಗಾಯಗೊಂಡವರು. ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯು
ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಇದೇ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಇವರು ಪಟಾಕಿ ಸಿಡಿಸುತ್ತಿದ್ದಾಗ, ಬೆಂಕಿಯ ಕಿಡಿ ತಗುಲಿದ ಪರಿಣಾಮ ಇವರ ಬಲಗಣ್ಣಿಗೆ ತೀವ್ರ ಗಾಯವಾಗಿದೆ. ಸ್ಥಳದಲ್ಲಿದ್ದ ಪೊಲೀಸರು, ಕೂಡಲೇ ಆಟೋ ವ್ಯವಸ್ಥೆ ಮಾಡಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕರೆ ದೊಯ್ಯಲಾಯಿತು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮಾಜಿ ಸಂಸದ ಪ್ರತಾಪ್‌ಸಿಂಹ ಅವರು ಗಾಯಾಳುವನ್ನು ಬೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.





