ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಭೀಕರ ಹತ್ಯೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ. ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಪ್ರೀತಿ ನಿರಾಕರಿಸಿದ ಕಾರಣಕ್ಕೆ ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇಂದು ( ಮೇ 15 ) ನಸುಕಿನ ಜಾವ ನಿದ್ರೆಯಲ್ಲಿದ್ದ ಅಂಜಲಿಯನ್ನು ವಿಶ್ವ ಎಂಬ ಆರೋಪಿ ಬೆಳಗ್ಗೆ 5.30ರ ಸಮಯಕ್ಕೆ ಮಲಗಿದ್ದಲ್ಲೇ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಇನ್ನು ವಿಶ್ವ ಅಂಜಲಿಯನ್ನು ಪ್ರೀತಿಸುತ್ತಿದ್ದ, ಆದರೆ ಅಂಜಲಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ.
ಈ ಹಿಂದೆ ಅಂಜಲಿಯನ್ನು ಮೈಸೂರಿಗೆ ಬರುವಂತೆ ಧಮ್ಕಿ ಹಾಕಿದ್ದ ವಿಶ್ವ ಒಂದುವೇಳೆ ಬಾರದೇ ಇದ್ದರೆ ನೇಹಾ ಹಿರೇಮಠ್ ಮಾದರಿಯಲ್ಲೇ ನಿನ್ನನ್ನೂ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ವಿಶ್ವ ವಿರುದ್ಧ ಹಲವು ಕಳ್ಳತನಗಳಲ್ಲಿ ಶಾಮೀಲಾದ ಪ್ರಕರಣಗಳಿವೆ.
ಇನ್ನು ವಿಶ್ವ ಕೊಲೆ ಬೆದರಿಕೆ ಹಾಕಿರುವ ವಿಚಾರವನ್ನು ಅಂಜಲಿಯ ಅಜ್ಜಿ ಗಂಗಮ್ಮ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಇದೆಲ್ಲಾ ಮೂಢನಂಬಿಕೆ ಎಂದು ಹೇಳಿದ್ದರು.