Mysore
22
scattered clouds

Social Media

ಬುಧವಾರ, 15 ಜನವರಿ 2025
Light
Dark

ಮೈಸೂರು: ಗುರಾಯಿಸಿದ ಕಾರಣಕ್ಕೆ ಯುವಕನ ಹತ್ಯೆ

ಮೈಸೂರು: ನನ್ನನ್ನು ಗುರಾಯಿಸಿ ನೋಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ನಾಲ್ವರು ಸೇರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಗರದ ಶಾಂತಿನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಶಾಂತಿನಗರದ ನಿವಾಸಿ ಜಾವಿದ್ ಪಾಷಾ ಎಂಬವರ ಮಗ ಹಾಗೂ ಪ್ರಥಮ ಪಿಯುಸಿ ತೇರ್ಗಡೆಯಾಗಿರುವ ಅರ್ಬಾದ್ ಖಾನ್(೧೮) ಎಂಬಾತನೇ ಹತ್ಯೆಗೀಡಾದವನು. ಕೂಲಿ ಕೆಲಸ ವಾಡುತ್ತಿದ್ದ ಶಾಬಾದ್ ಎಂಬಾತನೇ ಕೊಲೆಗೈದ ಆರೋಪಿ.

ಗುರುವಾರ ರಾತ್ರಿ ೯.೩೦ರ ವೇಳೆಯಲ್ಲಿ ಶಾಂತಿನಗರದ ಬಳಿ ಅರ್ಬಾದ್ ಖಾನ್ ಹಾಗೂ ಸ್ನೇಹಿತರು ಮಾತನಾಡುತ್ತಾ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಶಾಬಾದ್‌ನನ್ನು ಅರ್ಬಾದ್ ಗುರಾಯಿಸಿ ನೋಡಿದ್ದಾನೆ. ಇದನ್ನು ಶಾಬಾದ್ ಪ್ರಶ್ನಿಸಿದ್ದಾನೆ.

ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ಅಲ್ಲಿದ್ದವರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಶಾಬಾದ್ ಸುಲ್ತಾನ್ ರಸ್ತೆಯಲ್ಲಿರುವ ತನ್ನ ಮನೆಗೆ ತೆರಳಿ ತಂದೆ ಶಾದಿಲ್‌ಗೆ ವಿಚಾರ ತಿಳಿಸಿದ್ದಾನೆ. ನಂತರ ಸಹೋದರ ಶೋಯೆಬ್ ಹಾಗೂ ಸ್ನೇಹಿತ ಸಾಹಿಲ್‌ನೊಡನೆ ಅರ್ಬಾದ್ ಖಾನ್‌ನನ್ನು ಹುಡಿಕಿಕೊಂಡು ಎರಡು ಬೈಕ್‌ನಲ್ಲಿ ಬಂದಿದ್ದಾರೆ.

ಈ ವೇಳೆ ಶಾಂತಿನಗರದ ಲಾಲ್ ಬೇಕರಿ ಬಳಿ ಅರ್ಬಾದ್ ಹಾಗೂ ಸ್ನೇಹಿತರು ಕುಳಿತಿದ್ದರು. ಅಲ್ಲಿಗೆ ಬಂದ ನಾಲ್ವರು ಅರ್ಬಾದ್ ಹಾಗೂ ಸ್ನೇಹಿತರ ಮೇಲೆ ದಾಳಿ ನಡೆಸಿದ್ದಾರೆ. ಈ ನಡುವೆ ಎರಡೂ ಗುಂಪುಗಳ ನಡುವೆ ಜಗಳವಾಗಿದೆ.

ನಂತರ ಶಾಬಾದ್ ತನ್ನೊಡನೆ ತಂದಿದ್ದ ಚಾಕುವಿನಿಂದ ಅರ್ಬಾದ್‌ಗೆ ಇರಿದಿದ್ದಾನೆ. ಈ ನಡುವೆ ಶಾಬಾದ್ ಮೇಲೂ ಹಲ್ಲೆಯಾಗಿದೆ. ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಅರ್ಬಾದ್ ಖಾನ್ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಶಾಬಾದ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂದಿಸಿದಂತೆ ಶಾಬಾದ್, ತಂದೆ ಶಾದಿಲ್, ಸಹೋದರ ಶೋಯೆಬ್ ಹಾಗೂ ಸ್ನೇಹಿತ ಸಾಹಿಲ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: