ಮೈಸೂರು: ಲಾಭ ಗಳಿಸುವ ಆಸೆಯಿಂದ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಮೈಸೂರಿನ ವ್ಯಕ್ತಿಯೊಬ್ಬ ಬರೋಬ್ಬರಿ 86 ಲಕ್ಷ ಕಳೆದುಕೊಂಡು ಕಂಗಲಾಗಿದ್ದಾನೆ.
ಸಿಐಎನ್‌ವಿ ಎಂ/ಎಫ್ ಸಂಸ್ಥೆಯ ಸದಸ್ಯರಾಗಿರುವ ವಿಜಯ ನಗರ ನಿವಾಸಿ ಸತೀಶ್(61 ವರ್ಷ) ಹಣ ಕಳೆದುಕೊಂಡ ವ್ಯಕಿಯಾಗಿದ್ದಾರೆ. ಫೇಸ್ ಬುಕ್‌ನಲ್ಲಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣಗಳಿಸಬಹುದು ಎಂದು ಹೂಡಿಕೆ ಬಗ್ಗೆ ಫೇಸ್‌ಬುಕ್‌ನಲ್ಲಿ ನೀಡುತ್ತಿದ್ದ ತರಬೇತಿಯಿಂದ ಪ್ರೇರೇಪಿತರಾಗಿ ಅವರು ಹೇಳಿದ ಹಾಗೆ ಏಪ್ರಿಲ್ ತಿಂಗಳಿನಿಂದ ವಿವಿಧ ಹಂತಗಳಲ್ಲಿ 86 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.
ಲಾಭಾಂಶಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.