ನವದೆಹಲಿ: ಪ್ರಯಾಣಿಕ ವಾಹನಗಳ ದರ ಹೆಚ್ಚಳ ಮಾಡಲಾಗಿದ್ದು, ನವೆಂಬರ್ 7ರಿಂದ ಜಾರಿಗೆ ಬರಲಿದೆ ಎಂದು ಟಾಟಾ ಮೋಟಾರ್ಸ್ ಶನಿವಾರ ತಿಳಿಸಿದೆ. ಸರಾಸರಿ ಶೇಕಡಾ 0.9ರಷ್ಟು ದರ ಏರಿಕೆ ಮಾಡಲಾಗಿದೆ. ವಾಹನದ ವೇರಿಯೆಂಟ್, ಮಾದರಿಗಳ ಆಧಾರದಲ್ಲಿ ದರ ವ್ಯತ್ಯಾಸವಾಗಲಿದೆ ಎಂದು ಕಂಪನಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಒಟ್ಟಾರೆ ಇನ್‌ಪುಟ್ ವೆಚ್ಚದಲ್ಲಿನ ಅತಿಯಾದ ಹೆಚ್ಚಳವನ್ನು ಸರಿದೂಗಿಸಲು ಕನಿಷ್ಠ ಬೆಲೆ ಏರಿಕೆಯ ಮೂಲಕ ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಟಿಯಾಗೊ, ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ ಸೇರಿದಂತೆ ವಿವಿಧ ಬ್ರ್ಯಾಂಡ್ನ ಕಾರು / ವಾಹನಗಳನ್ನು ಕಂಪನಿ ಮಾರಾಟ ಮಾಡುತ್ತಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವು ನಿರಂತರವಾಗಿ ಹೆಚ್ಚುತ್ತಿದ್ದು, ಟಾಟಾ ಮೋಟಾರ್ಸ್ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಅಗ್ರ ಸ್ಥಾನ ಕಾಯ್ದುಕೊಂಡಿತ್ತು. ಟಾಟಾದ ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ ಕಾರುಗಳು ಅಗ್ರಸ್ಥಾನದಲ್ಲಿದ್ದು, ಎರಡು ಮಾದರಿಗಳು ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 2,831 ಯುನಿಟ್ ಮಾರಾಟಗೊಂಡಿದ್ದವು. ಈ ಕಾರುಗಳ ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತ ಶೇ. 271ರಷ್ಟು ಹೆಚ್ಚಳವಾಗಿತ್ತು. ನೆಕ್ಸಾನ್ ಇವಿಯಲ್ಲಿ ಮ್ಯಾಕ್ಸ್ ಎಡಿಷನ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ಇತ್ತೀಚೆಗೆ ಪ್ರಕಟಗೊಂಡಿದ್ದ ವಿಶ್ವದ ಅತ್ಯಂತ ಮೌಲ್ಯಯುತ 100 ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಕೂಡ ಟಾಟಾ ಗ್ರೂಪ್ ಸ್ಥಾನ ಗಳಿಸಿತ್ತು. ಪಟ್ಟಿಯಲ್ಲಿ ಕಂಪನಿಯು 77ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಆಟೊಮೊಬೈಲ್ ಉದ್ಯಮದಲ್ಲಿ ವಿಶೇಷ ಪ್ರಗತಿ ಸಾಧಿಸುವ ಮೂಲಕ ಟಾಟಾ ಗ್ರೂಪ್ ಇತ್ತೀಚೆಗೆ ಭಾರತದಲ್ಲಿ ಭಾರಿ ಪ್ರಸಿದ್ಧಿ ಪಡೆದಿದೆ. ವಿವಿಧ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿಯೂ ಕಂಪನಿ ಮುಂಚೂಣಿಯಲ್ಲಿದೆ. ಟಾಟಾ ಗ್ರೂಪ್ನ ಬ್ರ್ಯಾಂಡ್ ಆಗಿರುವ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.





